ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಸವಾಲು

ಬೆಂಗಳೂರು: ಚುನಾವಣಾ ಪ್ರಣಾಳಿಕೆಯಲ್ಲಿ ಹೇಳದೆ ಇರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಯಾವ ನೈತಿಕತೆಯೂ ಇಲ್ಲ. ಈ ತಿದ್ದುಪಡಿಗಳಿಂದ ರೈತರ ಕಲ್ಯಾಣವಾಗುತ್ತದೆ ಎಂಬ ಭರವಸೆ ಇದ್ದರೆ ಬಿ.ಎಸ್.ಯಡಿಯೂರಪ್ಪ  ಮೊದಲು ವಿಧಾನಸಭೆಯನ್ನು ವಿಸರ್ಜಿಸಿ ಇದೇ ವಿಷಯವನ್ನು ರಾಜ್ಯದ ಜನತೆಯ ಮುಂದಿಟ್ಟು ಚುನಾವಣೆಯನ್ನು ಎದುರಿಸಬೇಕು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೋನಾ ಸಂಕಟದಿಂದಾಗಿ ಕಷ್ಟ-ನಷ್ಟಕ್ಕೀಡಾಗಿರುವ ರೈತರು ಬೀದಿಗೆ ಬರಲಾರರು ಎಂಬ ದುಷ್ಟ ಆಲೋಚನೆಯಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಮೀಲಾಗಿ ಈ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ತರಾತುರಿಯಲ್ಲಿ ಹೊರಟಿದೆ. ಆದರೆ ಇಡೀ ದೇಶದ ರೈತರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಬೀದಿಗೆ ಇಳಿದು ಭಾರತೀಯ ಜನತಾ ಪಕ್ಷದ ಹುನ್ನಾರವನ್ನು ವಿಫಲಗೊಳಿಸಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಮಾತುಮಾತಿಗೆ ತಾನು ರೈತ ನಾಯಕನೆಂದು ಕರೆದುಕೊಳ್ಳುತ್ತಾರೆ. ಸಂಘ ಪರಿವಾರದ ಕೇಸರಿಶಾಲು ಕಿತ್ತುಹಾಕಿ ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಹಸಿರು ಶಾಲಿನ ಒಳಗಿದ್ದ ರೈತ ವಿರೋಧಿ ಕೇಸರಿ ಶಾಲು ಹೊರಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!