ಭ್ರಷ್ಟಾಚಾರ ಪ್ರಕರಣ: ಮಾಜಿ ಸಿಎಂ ಬಂಧನ

ಅಮರಾವತಿ: ಸ್ಕಿಲ್​ ಡೆವಲಪ್​​ಮೆಂಟ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥರಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ.

ನಂದ್ಯಾಲ್ ರೇಂಜ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (ಸಿಐಡಿ) ನೇತೃತ್ವದ ಪೊಲೀಸರ ತಂಡ ನಂದ್ಯಾಲ ಪಟ್ಟಣದಲ್ಲಿ ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಶಿಬಿರದಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಾಯ್ಡು ಅವರು ತಮ್ಮ ಕಾರವಾನ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಬಂಧನಕ್ಕೊಳಪಡಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರು, ಪೊಲೀಸರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಬೆಳಿಗ್ಗೆ 5.30 ರವರೆಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಬಿಡಲಿಲ್ಲ. ಕೊನೆಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ಪೊಲೀಸರು ನಾಯ್ಡು ವಾಹನದಿಂದ ಅವರನ್ನು ಕೆಳಗಿಳಿಸಿ ಬಂಧಿಸಿ, ವಿಜಯವಾಡಕ್ಕೆ ಸ್ಥಳಾಂತರ ಮಾಡಲಾಗಿದೆ.

ಪೊಲೀಸರು ನೀಡಿದ ನೋಟಿಸ್ ಪ್ರಕಾರ, ನಾಯ್ಡು ಅವರನ್ನು ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409, 201, 34 & 37 ಹಾಗೂ ಭ್ರಷ್ಟಾಚಾರ ತಡೆ ಕಾಯಿದೆ, 1988 ಇತರ ವಿಭಾಗಗಳಡಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೇ ನೋಟಿಸ್​ನಲ್ಲಿ ಜಾಮೀನು ರಹಿತ ಅಪರಾಧ, ಜಾಮೀನಿನ ಮೇಲೆ ಬಿಡುಗಡೆಯಾಗುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ, ನ್ಯಾಯಾಲಯದ ಮೂಲಕ ಮಾತ್ರ ಜಾಮೀನು ಪಡೆಯಬಹುದು ಎಂದು ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ ಧನುಂಜಯುಡು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!