ಭಾರತ 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿ ರಫ್ತು ಮಾಡಿದೆ: ವಿಶ್ವಸಂಸ್ಥೆಗೆ ಮೋದಿ

ವಿಶ್ವಸಂಸ್ಥೆ: ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ವಿಶ್ವಸಂಸ್ಥೆಯ ನೀತಿ ನಿರೂಪಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೇ ವೇಳೆ  ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಜಗತ್ತಿನ ಎಲ್ಲಾ ಮಾನವ ಕುಲಕ್ಕೆ  ಸಹಾಯ ಮಾಡಲು ಭಾರತ ತನ್ನ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಬಳಸುತ್ತದೆ ಎಂದು ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದರು.

“ಕಳೆದ 8 ರಿಂದ 9 ತಿಂಗಳುಗಳಲ್ಲಿ, ಇಡೀ ಜಗತ್ತು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ  ವಿಶ್ವಸಂಸ್ಥೆ ಎಲ್ಲಿ ಭಾಗವಹಿಸಿದೆ? ಅದರ ಪರಿಣಾಮಕಾರಿ ನೀತಿ ನಿರೂಪಣೆ ಹಾಗೂ ಪ್ರತಿಕ್ರಿಯೆ ಎಲ್ಲಿದೆ? ಇಷ್ಟಕ್ಕೂ ಇದು ವಿಶ್ವಸಂಸ್ಥೆಯ ಸ್ವರೂಪದಲ್ಲಿ ಸುಧಾರಣೆಯು ಅಗತ್ಯವಾಗಿರುವ ಸಮಯವಾಗಿದೆ. ” ಮೋದಿ ಹೇಳಿದರು.

ವಿಶ್ವಸಂಸ್ಥೆ ಸಾಮಾನ್ಯ ಸಭೆ ಯ 75 ನೇ ಅಧಿವೇಶನದ ಮಹತ್ವದ ಸಾಮಾನ್ಯ ಸಭೆ ಸಮಾವೇಶದಲ್ಲಿ ಮೋದಿ ತಾವು ಮೊದಲೇ ರೆಕಾರ್ಡ್ ಮಾಡಿದ್ದ ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸಾಂಕ್ರಾಮಿಕ ರೋಗದ ಉಲ್ಬಣದ ಈ ಕಷ್ಟದ ಸಮಯದಲ್ಲೂ ಭಾರತದ ಔಷಧ ಉದ್ಯಮವು 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಿಗಳನ್ನು ರಫ್ತು ಮಾಡಿದೆ ಎಂದು ಅವರು ಹೇಳೀದ್ದಾರೆ.

“ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಿಸುವ ದೇಶದ ನಾಯಕನಾಗಿ ನಾನು ಇಂದು ಜಾಗತಿಕ ಸಮುದಾಯಕ್ಕೆ ಇನ್ನೂ ಒಂದು ಆಶ್ವಾಸನೆ ನೀಡಲು ಬಯಸುತ್ತೇನೆ. ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಜಗತ್ತಿನ ಎಲ್ಲಾ ಮಾನವ ಸಮುದಾಯಕ್ಕೆ ಸಹಾಯ ಮಾಡಲು ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಬಳಸಲಾಗುತ್ತದೆ” ಕೊರೋನಾವೈರಸ್ ರೋಗವನ್ನು ಎದುರಿಸುತ್ತಿರುವ ಅಂತರರಾಷ್ಟ್ರೀಯ  ಸಮುದಾಯಕ್ಕೆ ಮೋದಿ ಭರವಸೆ ಕೊಟ್ಟರು.

ಕೋವಿಡ್ 19 ಸಾಂಕ್ರಾಮಿಕದಿಂದ ಈ ವರೆಗೆ ಜಾಗತಿಕವಾಗಿ  32 ದಶಲಕ್ಷಕ್ಕೂ ಹೆಚ್ಚು ಜನ ರೋಗಕ್ಕೀಡಾಗಿದ್ದು ವಿಶ್ವದಾದ್ಯಂತ 993,500 ಕ್ಕೂ ಹೆಚ್ಚು ಜನರು  ಬಲಿಯಾಗಿದ್ದಾರೆ. ಭಾರತದಲ್ಲಿ, ಮಾರಣಾಂತಿಕ ವೈರಸ್ ಸುಮಾರು 6 ಮಿಲಿಯನ್ ಜನರಿಗೆ ವ್ಯಾಪಿಸಿದ್ದು  93,000 ಕ್ಕೂ ಹೆಚ್ಚು ಜನರ ಮರಣಕ್ಕೆ ಕಾರಣವಾಗಿದೆ.

ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿವಿಶ್ವಸಂಸ್ಥೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವ ಪ್ರಧಾನ ಮಂತ್ರಿಯ ಹೇಳಿಕೆಗಳು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಹಿಸಿರುವ ಪಾತ್ರದ ಬಗ್ಗೆ ತೀವ್ರ ಟೀಕೆಗಳ ಮಧ್ಯೆ ಬಂದಿದೆ. ಪ್ರಧಾನಿ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದಿಂದ ನಿಯಂತ್ರಿಸಲ್ಪಟ್ಟಿದೆ ಎಂದು ಆರೋಪಿಸಿದ್ದರು. ಈ ಮುನ್ನ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಹುಟ್ಟಿದ ಕೊರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಟ್ರಂಪ್ ಪದೇ ಪದೇ ಚೀನಾವನ್ನು ದೂಷಿಸುತ್ತಿದ್ದರು 

“ನಾವು ಭಾರತದಲ್ಲಿ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳೊಂದಿಗೆ ಮುಂದುವರಿಯುತ್ತಿದ್ದೇವೆ” ಎಂದು ಮೋದಿ 193 ಸದಸ್ಯರ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ತಿಳಿಸಿದರು. ಲಸಿಕೆಗಳ ವಿತರಣೆಗೆ ಕೋಲ್ಡ್ ಚೈನ್ ಮತ್ತು ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತವು ಎಲ್ಲಾ ದೇಶಗಳಿಗೆ ಸಹಾಯ ಮಾಡುತ್ತದೆ ಎಂದು ಅವರು ಭರವಸೆ ನೀಡಿದರು.ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವ ನಾಯಕರು ವಾರ್ಷಿಕ ಸಭೆಗಾಗಿ ನ್ಯೂಯಾರ್ಕ್ ಗೆ ಪ್ರಯಾಣಿಸದ ಕಾರಣ ಈ ವರ್ಷದ ಉನ್ನತ ಮಟ್ಟದ ಸಮಾವೇಶವು ವರ್ಚುವಲ್ ಸ್ವರೂಪದಲ್ಲಿ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!