ಲಸಿಕೆಗೆ ಮೊದಲೇ 20 ಲಕ್ಷ ಜನರ ಬಲಿ ಪಡೆಯಲಿರುವ ಕೊರೋನಾ: ಡಬ್ಲ್ಯೂಎಚ್ಒ ಎಚ್ಚರಿಕೆ
ಜಿನೇವಾ: ಕೊರೋನಾ ಮಣಿಸಲು ಪರಿಣಾಮಕಾರಿ ಲಸಿಕೆ ಬಳಕೆಗೆ ಬರುವ ಮೊದಲೇ ಜಗತ್ತಿನಲ್ಲಿ ಸಾವಿನ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕಳವಳ ವ್ಯಕ್ತಪಡಿಸಿದೆ.
ತ್ವರಿತ, ಅಂತಾರಾಷ್ಟ್ರೀಯ ಕ್ರಮತೆಗೆದುಕೊಳ್ಳದೆ ಹೋದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ ಎಂದು ಡಬ್ಲ್ಯೂಎಚ್ಒದ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಮೈಕ್ ರಿಯಾನ್ ಹೇಳಿದ್ದಾರೆ.
ಚೀನಾದಲ್ಲಿ ಸೋಂಕು ಹರಡಲು ಆರಂಭಿಸಿ ಒಂಬತ್ತು ತಿಂಗಳ ಬಳಿಕ ಕೋವಿಡ್ 19 ಸಾವಿನ ಸಂಖ್ಯೆ 10 ಲಕ್ಷ ದಾಟಿದೆ ನಾವು ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಮುಂದೆ ಇದರಿಂದ 20 ಲಕ್ಷಕ್ಕೂ ಹೆಚ್ಚು ಸಾವು ಸಂಭವಿಸಲಿದೆ, ಇದು ಕೇವಲ ಊಹೆ , ಕಲ್ಪನೆಯಲ್ಲ ಬದಲಿಗೆ ದುರದೃಷ್ಟವಶಾತ್ ವಾಸ್ತವಿಕ ಸತ್ಯ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಲಾಕ್ಡೌನ್ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಸಡಿಲಿಸಲಾಗಿದ್ದು ಇದೀಗ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಗಿದೆ. ಕೊರೋನಾ ಸೋಂಕು ಹೆಚ್ಚಾಗಲು ಯುವಜನತೆ ಕಾರಣ ಎಂದು ಹೇಳಲಾಗುತ್ತಿದೆ. ಯುವಜನತೆಯ ಮೇಲೆ ಆಪಾದನೆ ಹೊರಿಸುವುದು ಸೂಕ್ತವಲ್ಲ. ಯುವಜನರ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ.
ಲಾಕ್ಡೌನ್ ಜಾರಿಗೊಳಿಸುವುದನ್ನು ತಪ್ಪಿಸಲು ಹಾಗೂ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಲು ಯಾವ ಕ್ರಮಗಳನ್ನು ಜಾರಿಗೆ ತರಬಹುದು ಎಂಬ ಬಗ್ಗೆ ಆಲೋಚಿಸುವಂತೆ ಇದೇ ವೇಳೆ ರಿಯಾನ್ ಅವರು ಸಲಹೆ ನೀಡಿದ್ದಾರೆ.
ಪರೀಕ್ಷೆ, ಪತ್ತೆಹಚ್ಚುವಿಕೆ, ಕ್ವಾರೆಂಟೈನ್, ಪ್ರತ್ಯೇಕವಾಗಿ ಇರಿಸುವಿಕೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆದುಕೊಳ್ಳುವಂತಹ ಪರ್ಯಾಯ ಕ್ರಿಯೆಗಳ ಬಗ್ಗೆ ಹೆಚ್ಚು ಗಮನ ಹರಿಸಲಾಗುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಮೆರಿಕವೊಂದರಲ್ಲಿಯೇ ಸಾವಿನ ಸಂಖ್ಯೆ 2 ಲಕ್ಷ ದಾಟಿದೆ. ಭಾರತ ಕೂಡ ಒಂದು ಲಕ್ಷದ ಗಡಿಯಲ್ಲಿದೆ. ಕೊರೊನಾ ಸಂಬಂಧಿ ಸಾವಿನ ಸಂಖ್ಯೆ 10 ಲಕ್ಷದ ಸಮೀಪ ಸಾಗಿದೆ. ವೈರಸ್ಗೆ ಪರಿಣಾಮಕಾರಿ ಲಸಿಕೆ ಕಂಡುಹಿಡಿಯಲು ಇನ್ನೂ ಸಾಕಷ್ಟು ಸಮಯ ತಗುಲಲಿದೆ. ಆ ವೇಳೆಗೆ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಅದನ್ನು ತಡೆಯಲು ಪರ್ಯಾಯ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯ ಎಂದು ಆರೋಗ್ಯ ಸಂಸ್ಥೆ ಹೇಳಿದೆ.