ಕೃಷಿ ಮಸೂದೆ ವಿರೋಧಿಸಿ ಬಂದ್: ಪಂಜಾಬ್, ಹರಿಯಾಣದಲ್ಲಿ ಉತ್ತಮ ಪ್ರತಿಕ್ರಿಯೆ

ನವದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕೆಲವು ರಾಜ್ಯಗಳಲ್ಲಿ ರೈತ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕೃಷಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ರಸ್ತೆ , ರೈಲು ರೊಕೋ ಚಳವಳಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೃಷಿಕರು, ಕೃಷಿ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ ಸೇರಿ ಹಲವು ವಿಪಕ್ಷಗಳು ಬೆಂಬಲ ಸೂಚಿಸಿವೆ. ಆದರೆ ಕರ್ನಾಟಕದಲ್ಲಿ ಇಂದು ಬಂದ್ ಇಲ್ಲ. ಬದಲಾಗಿ ರಾಜ್ಯಾದ್ಯಂತ ಹೆದ್ದಾರಿ ತಡೆ, ಪ್ರತಿಭಟನೆ ನಡೆಸುವುದಾಗಿ ರೈತ ಸಂಘಟನೆಗಳ ನಾಯಕರು ಹೇಳಿದ್ದಾರೆ. ಬಂದ್ ನಡೆಸುವ ವಿಚಾರದಲ್ಲಿ ರೈತ ನಾಯಕರಲ್ಲಿ ಒಮ್ಮತವಿಲ್ಲದರುವುದು ಗೊಂದಲಕ್ಕೆ ಕಾರಣವಾಗಿದೆ.

ಅಖಿಲ ಭಾರತ ರೈತ ಸಂಘ, ಭಾರತೀಯ ಕಿಸಾನ್ ಒಕ್ಕೂಟ, ಅಖಿಲ ಭಾರತ ಕಿಸಾನ್ ಮಹಾಸಂಘ, ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಸೇರಿದಂತೆ 10ಕ್ಕೂ ಹೆಚ್ಚು ಒಕ್ಕೂಟಗಳು ಬಂದ್ ಗೆ ಕರೆ ನೀಡಿದ್ದು, ಪಂಜಾಬ್ ನಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಎಲ್ಲ ರೀತಿಯ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.  ರೈತರು ಇಂದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮೃತಸರ ನಗರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕೃಷಿ ಮಸೂದೆ ವಿರೋಧಿಸಿ ರೈತರು, ಭಾರತೀಯ ಕಿಸಾನ್ ಯೂನಿಯನ್ ಮತ್ತು ರೆವಲ್ಯೂಷನರಿ ಮಾರ್ಕ್ಸ್‌ವಾದಿ ಪಾರ್ಟಿ ಆಫ್ ಇಂಡಿಯಾ (ಆರ್‌ಎಂಪಿಐ) ನೇತೃತ್ವದಲ್ಲಿ ಜಲಂಧರ್‌ನ ಫಿಲ್ಲೌರ್ ಬಳಿ ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದಾರೆ.

ಪಂಜಾಬ್ ನಲ್ಲಿ ಮಾತ್ರವಲ್ಲದೇ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲೂ ರೈತರ ಪ್ರತಿಭಟನೆ ಕಾವು ಹೆಚ್ಚಾಗುವ ಶಂಕೆ ಇದೆ. ಕರ್ನಾಟಕ-ತಮಿಳುನಾಡು ಹೆದ್ದಾರಿಯಲ್ಲಿ ಬೊಮ್ಮನಹಳ್ಳಿ ಬಳಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!