ಅವಿಶ್ವಾಸ ನಿರ್ಣಯ: ಯಾವಾಗ ಬೇಕಾದರೂ ಚರ್ಚೆಗೆ ಸಿದ್ಧ: ಸಿದ್ದರಾಮಯ್ಯ
ಬೆಂಗಳೂರು: ಸರ್ಕಾರದ ವಿರುದ್ಧ ಕಾಂಗ್ರೆಸ್ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಶನಿವಾರ ಈ ವಿಚಾರ ಚರ್ಚೆಗೆ ಬರಬಹುದೇನೋ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನದ ಧ್ವನಿಯಲ್ಲಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್‌ಗೆ ಅವಕಾಶ ಕೇಳಿದ್ದೇವಾದರೂ ಇಂದಿನ ಸದನದ ಕಾರ್ಯಸೂಚಿಯಲ್ಲಿ ಆ ಬಗ್ಗೆ ನಮೂದಾಗಿಲ್ಲ. ಯಾವಾಗ ಚರ್ಚಯೆಂದು ಹೇಳಿಲ್ಲ. ಸ್ಪೀಕರ್ ಯಾವಾಗ ಕರೆದರೂ ಚರ್ಚೆ ಮಾಡಲು ಸಿದ್ಧ. ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಕಂಡು ಜವಾಬ್ದಾರಿ ವಿರೋಧ ಪಕ್ಷವಾಗಿದ್ದು ಸುಮ್ಮನೆ ಇದ್ದರೆ ಜನ ಏನನ್ನುತ್ತಾರೆ? ಎಂದು ಮಾರ್ಮಿಕವಾಗಿ ನುಡಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭಂಡ ಸರ್ಕಾರ. ಈ ಸರ್ಕಾರಕ್ಕೆ ಏನೂ ಅನಿಸುವುದಿಲ್ಲ ಎಂದು ಸಿದ್ದರಾಮಯ್ಯ ಕುಟುಕಿದರು. ಯಡಿಯೂರಪ್ಪ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಯಡಿಯೂರಪ್ಪ ಮಗ, ಮೊಮ್ಮಗ, ಅಳಿಯ ಎಲ್ಲರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಈ ಹಿನ್ನಲೆಯಲ್ಲಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ಮಂಡಿಸಲು ನಾವು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಮೆಡಿಕಲ್, ಲ್ಯಾಪ್‌ಟಾಪ್, ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಭಿವೃದ್ಧಿ ಕುಂಟಿತವಾಗಿದೆ. ಆರ್ಥಿಕತೆ ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ರೈತರಿಗೆಮಾರಕವಾಗುವ ಭೂ ಸುಧಾರಣಾ ಕಾಯಿದೆ ಹಾಗೂ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದೆ. ಅದೇ ರೀತಿ ಕಾರ್ಮಿಕ ವಿರೋಧಿ ಕಾನೂನು ತಂದಿದೆ. ಯಡಿಯೂರಪ್ಪ ಒಂದು ವರ್ಷ ನಾಲ್ಕು ತಿಂಗಳಲ್ಲಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ತಮ್ಮ ಮಂತ್ರಿ ಮಂಡಲದ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ವಿರುದ್ಧ ಅವಿಶ್ವಾಸ ಮಂಡಿಸಲು ನಾವು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಸ್ಪೀಕರ್ ಗೆ ನೋಟಿಸ್ ಕೂಡ ಕೊಡಲಾಗಿದೆ ಎಂದು ಹೇಳಿದರು.