ವಾಸನೆ, ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರಿಗೂ ಸೋಂಕು: ನಿರ್ಲಕ್ಷಿಸಿದರೆ ಅಪಾಯ

ಬೆಂಗಳೂರು: ಜ್ವರ, ಕೆಮ್ಮು, ಶೀತ, ಉಸಿರಾಟದ ಸಮಸ್ಯೆಯಂತಹ ಸಾಮಾನ್ಯ ಲಕ್ಷಣಗಳ ಜತೆಗೆ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರು ಕೂಡ ಕೊರೊನಾ ಸೋಂಕಿತರಾಗುತ್ತಿರುವುದು ಪರೀಕ್ಷೆಯಿಂದ ದೃಢಪಡುತ್ತಿದೆ. ರಾಜ್ಯದಲ್ಲಿ ಸೊಂಕಿತರಾದ ಬಹುತೇಕರಲ್ಲಿ ಜ್ವರ, ಉಸಿರಾಟದ ಸಮಸ್ಯೆ, ಕೆಮ್ಮು, ಸೀನು ಸೇರಿದಂತೆ ವಿವಿಧ ಸಾಮಾನ್ಯ ಲಕ್ಷಣಗಳು ಕಾಣಿಸಿದ್ದವು.

‘ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆ ಸೋಂಕಿನ ಪರಿಣಾಮವೂ ಅಧಿಕವಾಗಲಿದೆ. ವ್ಯಕ್ತಿ ದಿಢೀರ್ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಳ್ಳುವುದು ಕೂಡ ಸೋಂಕಿನ ಲಕ್ಷಣ’ ಎಂದು ಅಮೆರಿಕದ ನ್ಯಾಷನಲ್‌ ಪಬ್ಲಿಕ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ನ ರೋಗ ನಿಯಂತ್ರಣ ವಿಭಾಗವು ಈಗಾಗಲೇ ಖಚಿತಪಡಿಸಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಕೂಡ ಈ ತಿಂಗಳು ವರದಿಯಾದ ಕೆಲ ಪ್ರಕರಣಗಳಲ್ಲಿ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡ ವ್ಯಕ್ತಿಗಳಲ್ಲಿ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅದೇ ರೀತಿ, ತಲೆನೋವು, ಆಯಾಸ, ಅತಿಸಾರ ಸಮಸ್ಯೆ ಇರುವವರಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ. 

ಅಪಾಯ: ಮೊದಲ ಕೋವಿಡ್ ಪ್ರಕರಣ ವರದಿಯಾದ ಬಳಿಕ ಹೆಚ್ಚಾಗಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಿದ್ದವು. ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡವರು ಕೂಡ ಇತ್ತೀಚಿನ ದಿನಗಳಲ್ಲಿ ಸೋಂಕಿತರಾಗುತ್ತಿದ್ದಾರೆ. ‘ಬೆನ್ನುನೋವಿನ ಸಮಸ್ಯೆ ಇರುವವರಿಗೆ, ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡವರಿಗೆ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ಇದು ನಮಗೆ ಕೂಡ ಅಚ್ಚರಿ ಮೂಡಿಸಿದೆ. ಅತಿಯಾದ ಆಯಾಸ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಸಹ ಸೋಂಕಿತನಾಗುವ ಸಾಧ್ಯತೆಯಿದೆ. ಹಾಗಾಗಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ 94ಕ್ಕಿಂತ ಕಡಿಮೆಯಾದಲ್ಲಿ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ’

ಸಿಟಿ ಸ್ಕ್ಯಾನ್‌ನಲ್ಲಿ ಸೋಂಕು ದೃಢ

‘ಆಯಾಸ, ತಲೆನೋವು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಾಗ ಕೆಲವರು ಕಡೆಗಣಿಸುವ ಸಾಧ್ಯತೆ ಇರುತ್ತದೆ. ಸಿಟಿ ಸ್ಕ್ಯಾನ್‌ ಮಾಡಿದಾಗ ಈ ರೀತಿ ಸಮಸ್ಯೆ ಎದುರಿಸುತ್ತಿರುವ ಕೆಲವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಪರೀಕ್ಷೆ ಮಾಡಿಸಿಕೊಳ್ಳಲು ವಿಳಂಬ ಮಾಡಿದಲ್ಲಿ ಶ್ವಾಸಕೋಶಕ್ಕೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಗಳು ಮಾತ್ರ ಕೋವಿಡ್ ಲಕ್ಷಣ ಅಂದುಕೊಳ್ಳುವುದನ್ನು ಬಿಟ್ಟು, ಆರೋಗ್ಯದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾದರೂ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‌ಗಳ ಅಸೋಸಿಯೇಷನ್ ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು.  

Leave a Reply

Your email address will not be published. Required fields are marked *

error: Content is protected !!