ನಮ್ಮ 5 ಗ್ಯಾರಂಟಿಗಳು ಬಿಜೆಪಿ ಪರಿವಾರಕ್ಕೆ ನಡುಕ ಹುಟ್ಟಿಸಿದೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜು.27: ‘ನಮ್ಮ ಐದು ಗ್ಯಾರಂಟಿಗಳು ಎಲ್ಲ್ಲ ಜಾತಿ, ಧರ್ಮ, ವರ್ಗಗಳ ಬದುಕಿಗೂ ಸ್ಪಂದಿಸಿವೆ. ಇದು ಬಿಜೆಪಿ ಪರಿವಾರಕ್ಕೆ ನಡುಕ ಹುಟ್ಟಿಸಿದೆ. ಹೀಗಾಗಿ ನಾಡಿನ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ವಿಪರೀತ ಸುಳ್ಳುಗಳನ್ನು, ನಕಲಿ ವಿಡಿಯೊಗಳನ್ನು ಸೃಷ್ಟಿಸುತ್ತಾರೆ. ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ, ಸುದ್ದಿ ಮಾಡಿಸಿದ್ದು ಈ ಕುತಂತ್ರದ ಭಾಗವೇ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ಅರಮನೆ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ನಡೆದ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ’ಯ ಅಧ್ಯಕ್ಷತೆವಹಿಸಿ ಮಾತನಡಿದ ಅವರು, ಬಿಜೆಪಿಯ ದುರಾಡಳಿತ, ಬೆಲೆ ಏರಿಕೆ, ಹಣದುಬ್ಬರ ದಿಂದ ನಾಡಿನ ಜನತೆ ಹೈರಾಣಾಗಿ ಅವರ ಬದುಕು ದುಸ್ತರವಾಗಿತ್ತು. ಹೀಗಾಗಿ ಐದು ಗ್ಯಾರಂಟಿಗಳ ಮೂಲಕ ನಾಡಿನ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಲು ನಾವು ಮುಂದಾದೆವು. ಇಡಿ ದೇಶದಲ್ಲಿ ಇಷ್ಟೊಂದು ದೊಡ್ಡ ಮಟ್ಟದ, ದೊಡ್ಡ ಮೊತ್ತದ ಜನ ಸ್ಪಂದನೆಯ ಯೋಜನೆಗಳನ್ನು ಜಾರಿಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರಕಾರ” ಎಂದರು.

“ನಮ್ಮ ಗ್ಯಾರಂಟಿ ಯೋಜನೆಗಳನ್ನು ನಮ್ಮ ನಾಡಿನ ಶೇ.97ಕ್ಕೂ ಹೆಚ್ಚು ಮಂದಿ ಸ್ವಾಗತಿಸಿ, ಸಂಭ್ರಮಿಸಿದ್ದಾರೆ. ಸಮಾಧಾನ ಪಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೆಲ್ಲಾ ವರದಿ ಮಾಡಿವೆ. ಇದು ಪ್ರತಿಯೊಬ್ಬ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಅಭಿಮಾನಿಗಳು ಎದೆ ಎತ್ತಿ ಹೆಮ್ಮೆ ಪಡುವ ಸಂದರ್ಭ ಎಂದು ”ಸಿದ್ದರಾಮಯ್ಯ ನುಡಿದರು.

ಬಿಜೆಪಿ ಸುಳ್ಳಿನ ಕಾರ್ಖಾನೆ: ‘ಬಿಜೆಪಿ ಪರಿವಾರ ಸುಳ್ಳಿನ ಕಾರ್ಖಾನೆ. ಮೊದಲು ಸುಳ್ಳನ್ನು ಸೃಷ್ಟಿಸುತ್ತಾರೆ. ಬಳಿಕ ಆ ಸುಳ್ಳನ್ನು ತಮ್ಮ ಸುಳ್ಳಿನ ಪರಿವಾರದ ಮೂಲಕ ಹರಡಿಸುತ್ತಾರೆ. ಕೊನೆಗೆ ಅದೇ ಸುಳ್ಳಿನ ಮೇಲೆ ಮಾಧ್ಯಮಗಳಲ್ಲಿ ಚರ್ಚೆ ಆಗುವಂತೆ ಮಾಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ ಎಂದ ಅವರು, ಸುಳ್ಳಿನ ಕಾರ್ಖಾನೆಯ ಕಾರ್ಮಿಕರು ಸುಳ್ಳನ್ನು ಸೃಷ್ಟಿಸಿ, ಅದನ್ನು ಸತ್ಯ ಎನ್ನುವಂತೆ ಬಿಂಬಿಸುತ್ತಾರೆ. ಇದಕ್ಕಾಗಿ ಅವರು ವಿಪರೀತ ಖರ್ಚು ಮಾಡುತ್ತಾರೆ. ಇದನ್ನೆಲ್ಲಾ ನಾವು ಸರಿಯಾಗಿ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಬೇಕೆಂದು ಅವರು ಹೇಳಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ತಿನ ಸಭಾ ನಾಯಕ ಎನ್.ಎಸ್. ಭೋಸರಾಜು, ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.

Leave a Reply

Your email address will not be published. Required fields are marked *

error: Content is protected !!