ಪ್ರತಿಭಟನೆ ನೆಪದಲ್ಲಿ ಗೂಂಡಾವರ್ತನೆ ಸಂವಿಧಾನ ಪೀಠಕ್ಕೆ ಮಾಡಿದ ಅವಮಾನ- ಕಾಂಚನ್

ಉಡುಪಿ: ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಬಿಜೆಪಿಯ ಶಾಸಕರು ಪ್ರತಿಭಟನೆಯ ನೆಪದಲ್ಲಿ ಉಪ ಸಭಾಪತಿಗಳಾದ ರುದ್ರಪ್ಪ ಲಮಾಣಿ ಅವರ ಮೇಲೆ ಸರ್ಕಾರಿ ಬಿಲ್ ಪ್ರತಿಗಳನ್ನು ಹರಿದು ಎಸೆದಿರುವುದು ಸಂವಿಧಾನದ ಪೀಠಕ್ಕೆ ಮಾಡಿದ ಅವಮಾನವಾಗಿದೆ. ಬಿಜೆಪಿ ಪಕ್ಷವು ಹಿಂದಿನಿಂದಲೂ ದಲಿತ ವಿರೋಧಿ ನೀತಿಯನ್ನು ಅನುಸರಿಸಿಕೊಂಡು ಬಂದಿದೆ. ಇದೀಗ ದಲಿತ ಸಮುದಾಯದ ಉಪ ಸಭಾಪತಿಯವರ ಮೇಲೆ ಸರ್ಕಾರಿ ಬಿಲ್‌ಗಳನ್ನು ಹರಿದು ಎಸೆದು ಮತ್ತೆ ಅವಮಾನ ಮಾಡಿದ್ದು ಇದು ಖಂಡನೀಯವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಇವರ ಗೂಂಡಾ ವರ್ತನೆಗೆ ಸ್ಪೀಕರ್ ಯು.ಟಿ ಖಾದರ್ ಅವರು ಬಿಜೆಪಿಯ ಹತ್ತು ಶಾಸಕರನ್ನು ಅಮಾನತು ಮಾಡಿದ್ದಾರೆ. ಈ ಗೂಂಡಾವರ್ತನೆಯಲ್ಲಿ ನಮ್ಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಸಕರೂ ಭಾಗಿಯಾಗಿರುವುದು ನಿಜಕ್ಕೂ ಖೇದಕರ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಸ್ತೆ ಸಮಸ್ಯೆ, ಮೀನುಗಾರಿಕೆಗೆ ಸಂಬಂಧ ಪಟ್ಟ ಸಮಸ್ಯೆ, ಕೃಷಿ ಸಂಬಂಧಿತ ಸಮಸ್ಯೆಗಳು, ಕಡಲ್ಕೊರೆತ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿ, ಮಳೆಯಿಂದಾಗಿ ನೆರೆ ಬಾಧಿತ ಪ್ರದೇಶಗಳಲ್ಲಿ ಸಮಸ್ಯೆ ನಿವಾರಣೆ ಕುರಿತು ವಿಧಾನ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಕ್ಷುಲ್ಲಕ ವಿಚಾರಗಳನ್ನು ನೆಪವಾಗಿಟ್ಟುಕೊಂಡು ಪ್ರತಿಭಟನೆಯ ಸೋಗಿನಲ್ಲಿ ಗೂಂಡಾವರ್ತನೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನ ಪೀಠಕ್ಕೆ ಮಾಡಿದ ಅವಮಾನವಾಗಿದೆ.

ಈ ಹಿಂದೆ ಉಡುಪಿ ಜಿಲ್ಲೆಯಿಂದ ಅನೇಕ ಶಾಸಕರು ಚುನಾಯಿತರಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ ಆದರೆ ಯಾರೂ ಕೂಡ ಯಾವುದೇ ಕಾರಣಕ್ಕೂ ವಿಧಾನಸಭಾ ಕಲಾಪಕ್ಕೆ ಚ್ಯುತಿ ಬರುವಂತೆ ವರ್ತಿಸಿರಲಿಲ್ಲ. ಆದರೆ ಈ ಬಾರಿ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಬಿಜೆಪಿ ಶಾಸಕರ ಗೂಂಡಾ ವರ್ತನೆಯಿಂದಾಗಿ ಇವರನ್ನು ಚುನಾಯಿಸಿ ಕಳುಹಿಸಿದ ಉಡುಪಿಯ ಜನತೆ ತಲೆ ತಗ್ಗಿಸುವಂತಾಗಿದೆ. ಇವರ ಈ ವರ್ತನೆಯಿಂದಾಗಿ ಕ್ಷೇತ್ರದ ಅಭಿವೃದ್ಧಿ ಆಗದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!