ಹೆಬ್ರಿ ಅಪಘಾತ: ಸಕಾಲದಲ್ಲಿ ಅಂಬುಲೆನ್ಸ್ ಸಿಗದೆ ಶಿಕ್ಷಕ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಮೃತ್ಯು

ಹೆಬ್ರಿ: ಹೆಬ್ರಿ -ಆಗುಂಬೆ ರಾಷ್ಟ್ರೀಯ ಹೆದ್ದಾರಿ 169 ಎ ಇಂದು ಮಧ್ಯಾಹ್ನ ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮೃತರಾಗಿದ್ದು, ಸಕಾಲದಲ್ಲಿ ಅಂಬುಲೆನ್ಸ್ ಹಾಗೂ ಅದೇ ದಾರಿಯಲ್ಲಿ ಹೋಗುವ ಯಾರೋಬ್ಬರೂ ಕೂಡ ಸ್ಪಂದಿಸಿದೆ ಇರುವುದರಿಂದ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎನ್ನಲಾಗಿದೆ.

ಸೋಮೇಶ್ವರ ಬಳಿ ಸೀತಾನದಿ ಎಂಬಲ್ಲಿ ಇಂದು ಮಧ್ಯಾಹ್ನ 1.30ರ ಸುಮಾರಿಗೆ ಉಡುಪಿಯಿಂದ ಆಗುಂಬೆ ಹೋಗುತ್ತಿರುವ ಬಸ್ ಹಾಗೂ ದಾವಣಗೆರೆಯ ಚೆನ್ನಗಿರಿಯಲ್ಲಿ ಮದುವೆ ಮುಗಿಸಿ ಉಡುಪಿಗೆ ಬರುತ್ತಿರುವ ಶಿಕ್ಷಕರ ಕಾರಿನ ನಡುವೆ ಅಪಘಾತ ನಡೆದಿದೆ.

ಮೃತಪಟ್ಟವರು ಉಡುಪಿ ಡಿಡಿಪಿಐ ಕಚೇರಿಯ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಬ್ಬಣ್ಣ ಗಾಣಿಗ ಹಾಗೂ ಉಡುಪಿ ಕುಕ್ಕಿಕಟ್ಟೆ ಇಂದಿರಾನಗರ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿರುವ ಸೋಮಶೇಖರ ಎನ್ನಲಾಗಿದೆ.

ಅಪಘಾತದ ತೀವ್ರತೆಯಿಂದ ಬಸ್ ನ ಒಳಗೆ ಸಿಲುಕಿದ್ದ ಕಾರನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಸಕಾಲಕ್ಕೆ ಅಂಬುಲೆನ್ಸ್ ಸಿಗದೆ ಹಾಗೂ ಯಾರು ಸಹಾಯಕ್ಕೆ ಬಾರದೆ ಇರುವುದನ್ನು ಗಮನಿಸಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಪ್ರಮೋದ್ ಶೆಟ್ಟಿ ಎಂಬವರು ನಾಲ್ವರನ್ನು ತನ್ನ ಕಾರಿಗೆ ಹಾಕಿಕೊಂಡು ಬಂದು ಹೆಬ್ರಿ ಸರಕಾರಿ ಆಸ್ಪತ್ರೆ ಸೇರಿಸಿದರು. ತುರ್ತು ಚಿಕಿತ್ಸೆ ಸಿಗದೆ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರ ಗಾಯಗೊಂಡ ಶಿಕ್ಷಕ ಸುದರ್ಶನ ಹಾಗೂ ಕಾರು ಚಲಾಯಿಸುತ್ತಿದ್ದ ಸತೀಶ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!