ಉಡುಪಿ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ
ಉಡುಪಿ, ಜೂ.4: ವಿದ್ಯಾರ್ಥಿಗಳು ಸೋಲಿನಿಂದ ಕಂಗೆಡದೆ ಗೆಲುವಿನತ್ತ ಮುನ್ನಡೆಯಬೇಕು. ಕಾಲೇಜು ಶಿಕ್ಷಣ ಮುಗಿದ ಬಳಿಕ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗದೆ ಬದುಕನ್ನು ಯಶಸ್ವಿಯಾಗಿ ರೂಪಿಸಿಕೊಳ್ಳ ಬೇಕು ಎಂದು ಮಣಿಪಾಲ ಎನರ್ಜಿ ಆ್ಯಂಡ್ ಇನ್ಫ್ರಾಟೆಕ್ ಇದರ ಆಡಳಿತ ನಿರ್ದೇಶಕ ಸಾಗರ್ ಮುಖ್ಯೋಪಾದ್ಯಾಯ್ ಹೇಳಿದ್ದಾರೆ.
ಉಡುಪಿ ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮೇ 31ರಂದು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಲೇಜಿನ ಪಠ್ಯದಿಂದ ಕಲಿಯುವುದಕ್ಕಿಂತ ಹೆಚ್ಚು ತಮ್ಮ ಜೀವನ ಅನುಭವದಿಂದ ಕಲಿಯುವುದು ಸಾಕಷ್ಟಿದೆ. ಆದುದರಿಂದ ಶಿಕ್ಷಣದ ಜೊತೆ ಜೀವನ ಮೌಲ್ಯ ಹಾಗೂ ಕೌಶಲ್ಯಗಳನ್ನು ಅಭ್ಯಸಿಸಿಕೊಂಡು ಮುನ್ನಡೆಯಬೇಕು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶು ಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ ವಾರ್ಷಿಕ ವರದಿ ವಾಚಿಸಿದರು.
ಸಂಧ್ಯಾ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯೋಜಕ ಡಾ.ವಿಶ್ವನಾಥ ಪೈ, ವಾಣಿಜ್ಯ ಶಾಸ್ತ್ರ ವಿಭಾಗದ ಸಂಯೋಜಕಿ ಡಾ.ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಸಂಗೀತ ಅನಂತ ನಾಯ್ಕ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ತನ್ಮಯ ನಾಯ್ಕಾ ವಂದಿಸಿದರು. ಸ್ವಾತಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.