ದೇಶವನ್ನು ಅಸ್ತಿರ ಗೊಳಿಸುವ ಹೇಳಿಕೆ-ಸಚಿವೆ ಶೋಭಾ ಜನರ ಕ್ಷಮೆಯಾಚಿಸಬೇಕು: ಮಂಜುನಾಥ್ ಭಂಡಾರಿ

ಉಡುಪಿ, ಜೂ.4: ಭಾರತವನ್ನು ಅಸ್ಥಿರಗೊಳಿಸಲು ಬಯಸುತ್ತಿರುವ ವಿದೇಶಿ ಶಕ್ತಿಗಳು ದೆಹಲಿಯಲ್ಲಿ ನಡೆಯುತ್ತಿ ರುವ ಕುಸ್ತಿಪಟುಗಳ ಪ್ರತಿಭಟನೆಗೆ ಆರ್ಥಿಕ ನೆರವು ನೀಡುತ್ತಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ಕೀಳು ಮಟ್ಟದ್ದಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬರುವ ವಿಚಾರವನ್ನು ಜನರ ಮುಂದೆ ಹೇಳಿಕೆಯಾಗಿ ನೀಡಬಾರದು. ಮೊದಲು ಕೂಲಂಕಷವಾಗಿ ಚರ್ಚೆ ಮಾಡಿ ನಂತರ ಹೇಳಿಕೆಯನ್ನು ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ಎಲ್ಲ ತನಿಖಾ ಸಂಸ್ಥೆಗಳು ಇವರ ಅಧೀನದಲ್ಲಿಯೇ ಇರುವುದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಶೋಭಾ ಕರಂದ್ಲಾಜೆ ಜನರ ಮುಂದೆ ಕ್ಷಮೆಯಾಚಿಸಿ, ಹೇಳಿಕೆಯನ್ನು ವಾಪಸ್ಸು ಪಡೆಯಬೇಕು. ಲಕ್ಷಾಂತರ ಜನ ಪ್ರಾಣ ಅರ್ಪಣೆ ಮಾಡಿ ಗಳಿಸಿರುವ ಈ ದೇಶವನ್ನು ಯಾರೋ ಅಸ್ಥಿರಗೊಳಿಸುತ್ತಿದ್ದಾರೆ ಎಂಬ ಬಾಲಿಷ ಹೇಳಿಕೆಯನ್ನು ಸಚಿವರು ಕೊಡಬಾರದು ಎಂದರು.

ಶೋಭಾ ಕರಂದ್ಲಾಜೆ ಮಹಿಳೆಯಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವೆಯಾಗಿ, ಮಹಿಳಾ ಕ್ರೀಡಾಪಟುಗಳ ಮೇಲಿನ ದೌರ್ಜನ್ಯದ ಬಗ್ಗೆ ಅರಿತುಕೊಳ್ಳಬೇಕು. ಅವರನ್ನು ಕರೆದು ಮಾತುಕತೆ ನಡೆಸುವ ಬದಲು ಅವರ ಮೇಲೆಯೇ ದೌರ್ಜನ್ಯ ಎಸಗುತ್ತಿದ್ದಾರೆ. ಇದೀಗ ಅವರ ಮೇಲಿನ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಗೇಡು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯ ಭಾರತ್ ಜೊಡೋ ಹಾಗೂ ಅಮೆರಿಕಾ ಕಾರ್ಯಕ್ರಮಕ್ಕೆ ಎನ್‌ಜಿಓ ಹಣ ಕೊಡುತ್ತಿದ್ದಾರೆ ಎಂಬ ಶೋಭಾ ಅವರ ಹೇಳಿಕೆಯು ರಾಜ್ಯ ಚುನಾವಣೆಯಲ್ಲಿ ಸೋಲಿನಿಂದ ಹತಾಷೆಗೊಂಡು ಹೇಳಿರುವುದಾಗಿದೆ. ತಮ್ಮ ದೌರ್ಬಲ್ಯವನ್ನು ಮರೆಮಾಚಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ರಾಹುಲ್ ಗಾಂಧಿ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ ಎಂಬುದು ಶೋಭಾ ಕರಂದ್ಲಾಜೆಯ ಮಾತಿನಿಂದ ಸಾಬೀತಾಗುತ್ತದೆ ಎಂದು ಟೀಕಿಸಿದರು.

ರಾಜ್ಯದಲ್ಲಿ 13 ಬಾರಿ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಈ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದಾರೆ. ಆದುದರಿಂದ ಇದಕ್ಕೆ ಎಲ್ಲಿಂದ ಹಣ ಹೊಂದಿಸುತ್ತಾರೆ ಎಂಬುದನ್ನು ನಾವು ಬಿಜೆಪಿಯವರಿಗೆ ಹೇಳಬೇಕಾಗಿಲ್ಲ. ಈ ಕುರಿತು ನಾವು ಜನತೆಗೆ ಉತ್ತರ ಕೊಡುತ್ತೇವೆ. ಸಂಸದರಾಗಿ ಇವರು ಜಿಎಸ್‌ಟಿ ಹಣದ ರಾಜ್ಯದಪಾಲನ್ನು ಕೇಂದ್ರದಿಂದ ಸರಿಯಾಗಿ ಕೊಡಿಸುವ ಕೆಲಸ ಮಾಡಲಿ. ಅದು ಬಿಟ್ಟು ಗ್ಯಾರಂಟಿಗೆ ಎಲ್ಲಿಂದ ಹಣ ತರುತ್ತೀರಿ ಎಂಬುದಾಗಿ ಪ್ರಶ್ನೆ ಕೇಳುವ ನೈತಿಕತೆ ಇವರಿಗೆ ಇಲ್ಲ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!