ಪಾಲಿಕೆ ವ್ಯಾಪ್ತಿಯ ಅನುದಾನ ತಡೆಯಿಂದ ತೀವ್ರ ಸಮಸ್ಯೆ: ಶಾಸಕ ಕಾಮತ್

ಮಂಗಳೂರು: ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅನುಮೋದನೆಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿ ಮುಂದಿನ ಹಣ ಬಿಡುಗಡೆ, ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿ ಸೂಚನೆ ಮೇರೆಗೆ ರಾಜ್ಯ ಸರಕಾರ ತಡೆ ನೀಡಿ ಆದೇಶ ಹೊರಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೂ ಅನುಷ್ಠಾನದ ಹಂತದಲ್ಲಿರುವ ನೂರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಸಮಸ್ಯೆ ಆಗಲಿದೆ. ರಾಜಕೀಯ ಕಾರಣಕ್ಕಾಗಿ ಸರಕಾರ ಹೊರಡಿಸಿದ ಈ ಆದೇಶದಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸರಕಾರದ ಈ ನಡೆ ಖಂಡನೀಯ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಈಗಾಗಲೇ ಮಳೆಗಾಲ ಆರಂಭ ಆಗಿರುವುದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಹತ್ತಾರು ಕಾಮಗಾರಿಗಳು ತುರ್ತಾಗಿ ಆಗಬೇಕಿದೆ. ಮಂಗಳೂರು ನಗರದಲ್ಲಿ ವಿಪರೀತ ಮಳೆ ಸುರಿಯುವುದರಿಂದ ಅಲ್ಲಲ್ಲಿ ನೆರೆ ಸಮಸ್ಯೆಗಳು ಉಂಟಾಗುತ್ತವೆ. ಕಾಮಗಾರಿಗಳು ನಿಂತು ಹೋದರೆ ಜನರ ಬದುಕು ನರಕಯಾತನೆ ಆಗಲಿದೆ. ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ನಡೆದಾಡಲೂ ಸಮಸ್ಯೆ ಆಗಲಿದೆ. ಕುಡಿಯುವ ನೀರಿನ ಕಾಮಗಾರಿ, ರಾಜಕಾಲುವೆಗಳಿಗೆ ತಡೆಗೋಡೆ ಕಾಮಗಾರಿಗಳು, ಚರಂಡಿ ನಿರ್ಮಾಣ, ಸ್ಮಾರ್ಟ್ ಸಿಟಿ ಯೋಜನೆಗಳು ಸೇರಿದಂತೆ ಹಲವು ಕಾಮಗಾರಿಗಳು ತುರ್ತಾಗಿ ನಡೆಯಬೇಕಿವೆ. ಆದರೆ ಈಗ ರಾಜ್ಯ ಸರಕಾರದ ಆದೇಶದಿಂದ ಎಲ್ಲದಕ್ಕೂ ತಡೆ ಬಿದ್ದಿದೆ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಆಡಳಿತ ನಡೆಸುವುದು ಸರಕಾರದ ಜನವಿರೋಧಿ ನೀತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ಸರಕಾರ ಅಧಿಕಾರ ನಡೆಸುವಾಗ ರಾಜಕೀಯ ದ್ವೇಷದ ಅಡಿಯಲ್ಲಿ ನಿರ್ಧಾರ ಕೈಗೊಳ್ಳಬಾರದು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ರಾಜಕೀಯ ಹಗೆತನ ಸಾಧಿಸುವ ಸಲುವಾಗಿ ಈ ಕೆಟ್ಟ ನಿರ್ಧಾರ ಕೈಗೊಂಡಿದೆ. ಸರಕಾರದ ಈ ನಡೆಯಿಂದಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಆಗಲಿದೆ. ತಕ್ಷಣ ಸರಕಾರ ಈ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಅವರು ಆಗ್ರಹಿಸಿದ್ದಾರೆ.

ಯಾವುದೇ ಸ್ಪಷ್ಟ ಕಾರಣ ಇಲ್ಲದೆ ಸರಕಾರ ಈ ನಿರ್ಧಾರ ಕೈಗೊಂಡಿದೆ. ಅನುದಾನ ತಡೆದು ಟೆಂಡರ್ ಆಗಿರುವ ಕಾಮಗಾರಿಗಳ ಗುತ್ತಿಗೆದಾರರನ್ನು ಬ್ಯ್ಲಾಕ್ ಮೇಲ್ ಮಾಡಿ ಕಮಿಷನ್ ಹೊಡೆಯುವ ದಂಧೆಯ ಭಾಗವಾಗಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಮುಂದೆ ಆಗುವ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್ ನೇತೃತ್ವದ ಸರಕಾರವೇ ನೇರ ಹೊಣೆ ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!