ಸರ್ಕಾರದ 5 ಗ್ಯಾರಂಟಿಗೆ ಗ್ರೀನ್ ಸಿಗ್ನಲ್… ಷರತ್ತುಗಳು ಏನು ಇಲ್ಲಿದೆ ಸಂಪೂರ್ಣ ಮಾಹಿತಿ…
ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನಾ ಜನತೆಗೆ ನೀಡಲಾಗಿದ್ದ ಎಲ್ಲಾ ಗ್ಯಾರಂಟಿ ಭರವಸೆಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೊದಲ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆಯನ್ನು ಜುಲೈ 1 ರಿಂದ ಜಾರಿ ಮಾಡಲಾಗುವುದು. 12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇಕಡಾ 10 ರಷ್ಟು ಸೇರಿಸಿ, ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು ಎಂದರು.
ಈ ಹಿಂದಿನ ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು.ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ನಿಂದ ಅನ್ವಯವಾಗಲಿದೆ. ಬಾಡಿಗೆದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
ಯಾವುದೇ ಜಾತಿ, ಧರ್ಮಗಳ ತಾರತಮ್ಯ ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಎಂದ ಸಿದ್ದರಾಮಯ್ಯ, ಈ ಆರ್ಥಿಕ ವರ್ಷದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
2 ನೇ ಯೋಜನೆ ‘ಗೃಹಲಕ್ಷ್ಮಿ’ಯನ್ನು ಆಗಸ್ಟ್ 15 ರಂದು ಅನುಷ್ಠಾನಕ್ಕೆ ತರಲಾಗುವುದು, ಈ ಯೋಜನೆಯಡಿ ಬಿಪಿಎಲ್ , ಎಪಿಎಲ್ ಖಾತೆದಾರರ ಮನೆ ಯಜಮಾನಿ ಖಾತೆಗೆ ಹಣ ಮಾಡಲಾಗುವುದು, ಆದರೆ, ಯೋಜನೆ ಫಲಾನುಭವಿಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು, ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು. ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದರು.
3 ನೇ ಗ್ಯಾರಂಟಿ ಅನ್ನಭಾಗ್ಯ ಯೋಜನೆಯಡಿ ಜುಲೈ 1 ರಿಂದ ಎಲ್ಲಾ ಬಿಪಿಎಲ್ ಕಾರ್ಡ್ ದಾರರು ಮತ್ತು ಅಂತ್ಯೋದಯ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
4 ನೇ ಗ್ಯಾರಂಟಿ ಶಕ್ತಿ: ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದಲ್ಲಿನ ಎಲ್ಲಾ ಮಹಿಳೆಯರು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಈ ತಿಂಗಳು 11 ನೇ ತಾರೀಖು ಚಾಲನೆ ನೀಡಲಾಗುವುದು, ಬೆಂಗಳೂರಿನಿಂದ ತಿರುಪತಿ, ಬೆಂಗಳೂರಿನಿಂದ ಹೈದರಾಬಾದ್‌ಗೆ ಅವಕಾಶ ವಿಲ್ಲ. ಎಸಿ ಮತ್ತು ಲಕ್ಸುರಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಕೆಎಸ್ ಆರ್ ಟಿ ಸಿ ಬಸ್ ನಲ್ಲಿ ಶೇ.50 ರಷ್ಟು ಸೀಟು ಪುರುಷರಿಗೆ ಮೀಸಲು, ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ ಲಕ್ಸ್ಯೂರಿ, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಇದು ಅನ್ವಯವಾಗಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಉಚಿತ ಬಸ್ ಪ್ರಯಾಣದ ಸವಲತ್ತನ್ನು ತೃತೀಯ ಲಿಂಗಿಗಳಿಗೂ ಒದಗಿಸಲಾಗಿದೆ.
5 ನೇ ಗ್ಯಾರಂಟಿ ಯುವನಿಧಿ: 2022-23ರಲ್ಲಿ ಪಾಸ್ ಆದ ಪದವೀಧರ ನಿರುದ್ಯೋಗಿಗಳಿಗೆ ನೋಂದಣಿಯಾದ 24 ತಿಂಗಳ ವರಗೆ ಪ್ರತಿ ತಿಂಗಳಿಗೆ 3,000 ಮತ್ತು ಡಿಪ್ಲೋಮಾ ಮಾಡಿದವರಿಗೆ 1, 1500 ಗೌರವ ಧನ ನೀಡಲಾಗುವುದು ಎಂದ ಮುಖ್ಯಮಂತ್ರಿ ತಿಳಿಸಿದರು. ವೃತ್ತಿಪರ ಶಿಕ್ಷಣ ಸೇರಿದಂತೆ ಎಲ್ಲಾ ಪದವೀಧರ ನಿರುದ್ಯೋಗಿಗಳಿಗೆ ಇದು ಅನ್ವಯವಾಗಲಿದೆ. ತೃತೀಯ ಲಿಂಗಿಗಳಿಗೂ ಕೂಡಾ ಈ ಯೋಜನೆ ಅನ್ವಯ ನಿರುದ್ಯೋಗ ಭತ್ಯೆ ನೀಡಲಾಗುವುದು, ಇದಕ್ಕಾಗಿ ಅರ್ಜಿ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಪಪಡಿಸಿದರು.