ಉಡುಪಿ: 24 ಗಂಟೆ ಸುರಿದ ಭಾರಿ ಮಳೆ, ನೆರೆಯಿಂದಾಗಿ ಹಲವಾರು ಮನೆಗಳು ಜಲಾವೃತ
ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಲ್ಲಿ ನಿರಂತರ 24 ಗಂಟೆಗಳ ಕಾಲ ಸುರಿದ ಮಳೆಯಿಂದ ಹಲವಾರು ನದಿ ಪಾತ್ರದ ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯ ಪ್ರಾರಂಭವಾಗಿದೆ.
ನೆರೆಯಿಂದಾಗಿ ಉಡುಪಿ ಕಲ್ಸಂಕ ಮಣಿಪಾಲ, ಗುಂಡಿಬೈಲು, ಮಲ್ಪೆ ರಸ್ತೆಗಳ ಸಂಚಾರ ಸ್ಥಗಿತವಾಗಿದೆ . ಅಂಬಲಪಾಡಿ, ಮಠದಬೆಟ್ಟು, ಗುಂಡಿಬೈಲು, ಬನ್ನಂಜೆ, ಕಾಪು ಸೇರಿದಂತೆ ಹಲವು ಭಾಗದಲ್ಲಿ ನೆರೆ ಹಾವಳಿ ತೀವ್ರವಾಗಿದ್ದು, ಇಲ್ಲಿವರೆಗೆ 50 ಕುಟುಂಬಗಳನ್ನು ರಕ್ಷಣೆ ಮಾಡಲಾಗಿ, ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ರಾತ್ರೋ ರಾತ್ರಿ ನೆರೆ ನೀರು ಅಲೆವೂರು, ಕೆಮ್ತೂರು, ಉದ್ಯಾವಾರ, ಬೊಳ್ಜೆ, ಕಲ್ಸಂಕ, ನಿಟ್ಟೂರು, ಬಲೈಪಾದೆ, ಬನ್ನಂಜೆ, ಕಲ್ಮಾಡಿಯ ಸಹಿತ ಅನೇಕ ಮನೆಗಳಿಗೆ ನೆರೆ ನೀರು ತುಂಬಿದ್ದು, ಕೆಲವೊಂದು ಮನೆಯವರನ್ನು ರಕ್ಷಿಸಿಲಾಗಿದೆ.
ಅಲೆವೂರಿನ ಪೆರುಪಾದೆ ಎಂಬಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು, ಮನೆ ಮಂದಿ ರಕ್ಷಣೆ ಮಾಡಲು ಸ್ಥಳೀಯರನ್ನು ಒತ್ತಾಯಿಸಿದ್ದಾರೆ.
ನಿಟ್ಟೂರು, ಅಡ್ಕದಕಟ್ಟೆ ತಡ ರಾತ್ರಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ರಕ್ಷಣಾ ಕಾರ್ಯದಲ್ಲಿ ತಮ್ಮ ತಂಡದೊಂದಿಗೆ ಮಾಡುತ್ತಿದ್ದಾರೆ.
ಶ್ರೀಕೃಷ್ಣ ಮಠದ ಪಾರ್ಕಿಂಗ್, ಬಡಗುಪೇಟೆಯ ಹಲವಾರು ಅಂಗಡಿಗಳಿಗೆ ನೆರೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ವರ್ಣ ನದಿ ಉಕ್ಕಿ ಹರಿದಿದ್ದು, ಇಲ್ಲಿನ ನದಿ ಪಾತ್ರದ ಪುತ್ತಿಗೆ ಎಂಬಲ್ಲಿ ಹಲವಾರು ಮನೆಗಳು ನೆರೆ ನೀರಿನಿಂದ ಜಲಾವೃತ್ತವಾಗಿದೆ.
ಮೂರು ದಿನ ರೆಡ್ ಅಲರ್ಟ್: ಕರಾವಳಿಯಲ್ಲಿ ಸೆ. 20, 21 ಮತ್ತು 22ರಂದು ರೆಡ್ ಹಾಗೂ ಸೆ. 23ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಕೆಲವೆಡೆ ಹಾನಿಯೂ ಸಂಭವಿಸಿದೆ.
Good