ಕುಚ್ಚಲು ಅಕ್ಕಿ ವಿತರಣೆ ಮಾಡಲಾಗದವರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಶ್ನಿಸಿಸುತ್ತಾರೆ- ಕಾಂಚನ್

ಉಡುಪಿ: ಕರಾವಳಿಗರಿಗೆ ಕುಚ್ಚಲು ಅಕ್ಕಿಯನ್ನು ವಿತರಣೆ ಮಾಡುವುದಾಗಿ ಜನರಿಗೆ ಟೋಪಿ ಹಾಕಿ ಈಗ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ದಿನನಿತ್ಯ ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಎಬ್ಬಿಸುತ್ತಿರುವ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಸ್ಥಿತಿಗೆ ನಿಜಕ್ಕೂ ಮರುಕಪಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಹೇಳಿದ್ದಾರೆ.

ಸಚಿವರು ತಮ್ಮ ಬಿಜೆಪಿ ಸರಕಾರ ಇದ್ದಾಗ ಪ್ರತಿನಿತ್ಯ ಎಂಬಂತೆ ಕರಾವಳಿಗರಿಗೆ ಕುಚ್ಚಲು ಅಕ್ಕಿ ಪಡಿತರ ಕೇಂದ್ರದಲ್ಲಿ ವಿತರಿಸುವುದಾಗಿ ಹೇಳಿಕೊಂಡು ಬಂದಿದ್ದು ಬಿಟ್ಟರೆ ಕೊನೆತನಕವೂ ಅದನ್ನು ಜಾರಿಮಾಡಲು ಅವರಿಂದ ಸಾಧ್ಯವಾಗಿಲ್ಲ. ಕೊನೆಗೆ ಅವರು ಸೂಕ್ತ ಪ್ರಮಾಣದಲ್ಲಿ ಕುಚ್ಚಲು ಅಕ್ಕಿ ಮಾರುಕಟ್ಟೆಯಲ್ಲಿ ಲಭ್ಯವಾಗದ ಕಾರಣ ನೀಡಲು ಸಾಧ್ಯವಾಗಿಲ್ಲ ಎಂದು ತೇಪೆ ಹಚ್ಚಿದ್ದು ಬಿಟ್ಟರೆ ಮತ್ತೇನು ಸಾಧನೆ ಅವರು ಮಾಡಿಲ್ಲ.

ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದರೂ ಸಹ ಪ್ರತಿನಿತ್ಯ ಬಿಜೆಪಿಗರು ತಮ್ಮ ಕುಹಕಗಳನ್ನು ಮುಂದುವರಿಸಿದ್ದಾರೆ . ಗ್ಯಾರಂಟಿ ಕಾರ್ಡ್‌ನಲ್ಲಿ ಭರವಸೆಗಳಿಗೆ ಸೂಕ್ತವಾದ ಹಣಕಾಸು ವ್ಯವಸ್ಥೆಯ ಬಗ್ಗೆ ಪರಿಶೀಲನೆ ಮಾಡಿ ಅದಕ್ಕೆ ಅಗತ್ಯವಾದ ಮಾನದಂಡಗಳನ್ನು ರಚಿಸಿ ಅಧಿಕೃತವಾಗಿ ಇನ್ನೇರಡು ದಿನಗಳಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಅಲ್ಲಿಯ ತನಕ ಕಾಯಲು ಸಹ ಸಾಧ್ಯವಾಗದ ಬಿಜೆಪಿ ಪಕ್ಷದ ನಾಯಕರು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಅವರಿಗೆ ಅಧಿಕಾರ ಇಲ್ಲದೆ ಆಗುತ್ತಿರುವ ಚಡಪಡಿಕೆ ಎನ್ನುವುದು ಎದ್ದು ಕಾಣುತ್ತದೆ.

ಮೋದಿಯವರು ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿಲ್ಲ ಬದಲಾಗಿ ವಿದೇಶದಲ್ಲಿನ ಕಪ್ಪು ಹಣ ವಾಪಾಸು ತಂದರೆ ಹಾಕಲು ಸಾಧ್ಯವಾಗುತ್ತದೆ ಎಂದು ಹೊಸ ವರಸೆ ಪ್ರಾರಂಭಿಸಿರುವ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಬಿಜೆಪಿಗರೇ ಯಾಕೆ ಇದುವರೆಗೆ ಪ್ರಧಾನಿ ಮೋದಿಯವರಿಗೆ ವಿದೇಶದಲ್ಲಿನ ಕಪ್ಪುಹಣ ಭಾರತಕ್ಕೆ ತರಲು ಸಾಧ್ಯವಾಗಿಲ್ಲ. ಅದನ್ನು ಕೂಡ ಪ್ರಶ್ನೆ ಮಾಡಿದರೆ ಮೋದಿಯವರು ಕಪ್ಪು ಹಣದ ಬಗ್ಗೆ ಮಾತೇ ಆಡಿಲ್ಲ ಅನ್ನುವ ಜಾಯಮಾನ ಬಿಜೆಪಿಯವರದ್ದು.

ಕಳೆದ 9 ವರ್ಷಗಳಿಂದ ಯಾವುದೇ ಜನಪರ ಯೋಜನೆಗಳನ್ನು ನೀಡದೇ ಕೇವಲ ಬೆಲೆ ಏರಿಕೆಯೊಂದೇ ಇವರ ಸಾಧನೆ ಆಗಿದ್ದು ಬಡ ಜನರಿಗಾಗಿ ಕಾಂಗ್ರೆಸ್ ಪಕ್ಷ ತಂದಿರುವ 5 ಗ್ಯಾರಂಟಿಗಳು ಜಾರಿಯಾದರೆ ಮುಂದೆ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲದಂತಾಗುತ್ತದೆ ಎಂಬ ಭಯ ಈಗಲೇ ಕಾಡುತ್ತಿದ್ದು ಅದಕ್ಕಾಗಿ ಇಂತಹ ಹೇಳಿಕೆಗಳ ಮೂಲಕ ಪ್ರಚಲಿತದಲ್ಲಿ ಇರಲು ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಹಿತ ಬಿಜೆಪಿ ನಾಯಕರು ಹೆಣಗಾಡುತ್ತಿದ್ದಾರೆ.

ಬಿಜೆಪಿಯವರ ಮೋಸವನ್ನು ಜನ ಕಂಡು ಬೇಸರಗೊಂಡು ಈ ಬಾರಿ ಕಾಂಗ್ರೆಸ್‌ನ ಸುಭದ್ರ ಸರಕಾರಕ್ಕೆ ತನ್ನ ಬೆಂಬಲ ನೀಡಿದ್ದು ಎಷ್ಟೇ ಕಷ್ಟವಾದರೂ ಕೂಡ ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಬದ್ಧವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!