ಪ್ರಧಾನಿ ಮೋದಿಯ 70ನೇ ಜನ್ಮದಿನವನ್ನು ‘ನಿರುದ್ಯೋಗ ದಿನ’ ಎಂದು ಟೀಕಿಸಿದ ಪ್ರಿಯಾಂಕಾ ವಾದ್ರಾ

ಲಖನೌ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನವನ್ನು ‘ನಿರುದ್ಯೋಗ ದಿನ’ ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಸರ್ಕಾರ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರೆ, ಯುವಕರು ಸರ್ಕಾರವನ್ನು ಬದಲಾಯಿಸುತ್ತಾರೆ ಎಂದು ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಸಮಯೋಚಿತ ಪರೀಕ್ಷೆಗಳು, ಸರಿಯಾದ ಸಮಯದಲ್ಲಿ ಫಲಿತಾಂಶಗಳು, ಉದ್ಯೋಗಗಳಲ್ಲಿ ಹೆಚ್ಚಳ ಮತ್ತು ಗುತ್ತಿಗೆ ಕಾನೂನನ್ನು ಹಿಂತೆಗೆದುಕೊಳ್ಳುವುದು ಯುವಜನತೆಯ ಬೇಡಿಕೆಗಳಾಗಿವೆ” ಎಂದು ಟ್ವೀಟ್ ಮಾಡಿದ್ದಾರೆ.

ನಿರುದ್ಯೋಗ ಸಮಸ್ಯೆ ರಾಜಕೀಯ ವಿಚಾರ ಅಲ್ಲ. ಅದು ಮಾನವೀಯತೆ ಎಂದಿರುವ ಪ್ರಿಯಾಂಕಾ, “ಯುವಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ದೊಡ್ಡ ದನಿಯೆತ್ತಿದ್ದಾರೆ. ಆದಾಗ್ಯೂ ಸರ್ಕಾರ ಇನ್ನೂ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡರೆ, ತನ್ನ ನಿಲುವನ್ನು ಬದಲಾಯಿಸದಿದ್ದರೆ, ಯುವಜನತೆಯೇ ಸರ್ಕಾರವನ್ನು ಬದಲಾಯಿಸುತ್ತಾರೆ” ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ಟ್ವೀಟ್‌ನ ಕೊನೆಯಲ್ಲಿ, ಇಂದು ರಾಷ್ಟ್ರೀಯ ನಿರುದ್ಯೋಗ ದಿನ ಎಂದು ವ್ಯಂಗ್ಯವಾಗಡಿದ್ದಾರೆ. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷವು ನರೇಂದ್ರ ಮೋದಿಯವರ ಜನ್ಮದಿನವನ್ನು ನಿರುದ್ಯೋಗ ದಿನವೆಂದು ಆಚರಿಸುತ್ತಿದ್ದರೆ, ಬಿಜೆಪಿ ‘ಸೇವಾ ಸಪ್ತಾಹ’ ಎಂದು ಆಚರಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!