ಸಚಿವ ವಿ.ಸುನಿಲ್ ಕುಮಾರ್ ಘೋಷಿಸಿದ ಆದಾಯ ಎಷ್ಟು ಗೊತ್ತಾ…?

ಉಡುಪಿ, ಎ.19: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಐದನೇ ಬಾರಿಗೆ ಸ್ಪರ್ಧಿಸುತ್ತಿರುವ ಹಾಲಿ ಶಾಸಕ ಬಿಜೆಪಿಯ ವಿ.ಸುನೀಲ್ ಕುಮಾರ್ ಅವರ ಒಟ್ಟು ಆದಾಯದಲ್ಲಿ ಕಳೆದ ಚುನಾವಣೆಗಿಂತ ಗಣನೀಯ ಏರಿಕೆಯಾಗಿದೆ.

ಇಂದು ಕಾರ್ಕಳದಲ್ಲಿ ಐದನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಸುನೀಲ್ ಕುಮಾರ್(47), ಇದರೊಂದಿಗೆ ನೀಡಿರುವ ತನ್ನ ಕುಟುಂಬದ ಆಸ್ತಿ-ಪಾಸ್ತಿಯ ವಿವರಗಳಿಂದ ಈ ವಿಷಯ ತಿಳಿದುಬರುತ್ತದೆ. ಅದು ನೀಡಿರುವ ಮಾಹಿತಿಯಂತೆ ಅವರ ಒಟ್ಟು ಸಂಪತ್ತಿನ ಮೊತ್ತ 5,63,48,832 ರೂ. (5.63 ಕೋಟಿ ರೂ.) ಗಳಾಗಿವೆ. 2018ರಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅವರು ಸಲ್ಲಿಸಿದ ಅಫಿದಾವತ್‌ನಲ್ಲಿ ಅವರ ಒಟ್ಟು ಸಂಪತ್ತಿನ ಮೊತ್ತ 2,22,10,194 ರೂ. (2.22 ಕೋಟಿ ರೂ.) ಗಳಾಗಿತ್ತು.

ಇದರಲ್ಲಿ ಸುನಿಲ್ ಕುಮಾರ್ ಅವರಲ್ಲಿರುವ ಚರಾಸ್ಥಿಯ ಮೊತ್ತ 1,59,72,832 ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 4,03,76,000ರೂ. ಗಳಾಗಿವೆ. ಇನ್ನು ಪತ್ನಿ ಪ್ರಿಯಾಂಕ ಅವರ ಆದಾಯದಲ್ಲೂ ಹೆಚ್ಚಳ ಕಂಡುಬಂದಿದೆ. ಅವರ ಒಟ್ಟು ಆದಾಯ 1,80,51,942 ರೂ.ಗಳಾಗಿವೆ. ಇದರಲ್ಲಿ 1.42 ಕೋಟಿ ರೂ. ಚರಾಸ್ಥಿಯಾದರೆ, 37.62 ಲಕ್ಷ ರೂ. ಸ್ಥಿರಾಸ್ಥಿ.

ಸುನಿಲ್ ಕುಮಾರ್ ಬಳಿ 18,650ರೂ. ನಗದು, ಪತ್ನಿ ಬಳಿ 14,500ರೂ. ನಗದು ಹಣವಿದೆ. ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಕಂಪೆನಿಗಳಲ್ಲಿ ಶೇರು, ಬಾಂಡುಗಳು ವಿವಿಧ ಪಾಲಿಸಿಗಳು, ಎನ್ಎಸ್ಎಸ್ ಉಳಿತಾಯ, 14.31 ಲಕ್ಷ ರೂ. ಮೌಲ್ಯದ 272.70 ಗ್ರಾಂ ಚಿನ್ನ ಸೇರಿದಂತೆ ಅವರ ಚರಾಸ್ತಿಗಳ ಒಟ್ಟು ಮೌಲ್ಯ 1.59 ಕೋಟಿ ರೂ.ಗಳಾಗಿವೆ. ಅವರ ಪತ್ನಿಯ ಬಳಿ 1.17 ಕೋಟಿ ರೂ.ಮೌಲ್ಯದ 2230ಗ್ರಾಂ ಚಿನ್ನ, 7.42 ಲಕ್ಷ ರೂ.ಮೌಲ್ಯದ ಬೆಳ್ಳಿ ಸಾಮಗ್ರಿ ಸೇರಿದಂತೆ ಇರುವ ಚರಾಸ್ಥಿಯ ಒಟ್ಟು ಮೌಲ್ಯ 1.42 ಕೋಟಿ ರೂ. ಗಳಾಗಿವೆ. ಅಲ್ಲದೇ ಸುನಿಲ್ ಅವರಲ್ಲಿ 24.60 ಲಕ್ಷ ರೂ.ಮೌಲ್ಯದ ಟೊಯೊಟಾ ಇನ್ನೋವಾ ಕಾರು ಸಹ ಇದೆ.

ಸುನೀಲ್ ಕುಮಾರ್ ಅವರ ಸ್ವಯಾರ್ಜಿತ ಸ್ವತ್ತುಗಳು, ಮನೆ ಸೇರಿದಂತೆ ಇರುವ ಸ್ಥಿರಾಸ್ಥಿಯ ಒಟ್ಟು ಮೌಲ್ಯ 4.03 ಕೋಟಿ ರೂ.ಗಳಾಗಿವೆ. ಪತ್ನಿ ಪ್ರಿಯಾಂಕ ಹೆಸರಿನಲ್ಲಿ 37.62 ಲಕ್ಷ ರೂ.ಮೌಲ್ಯದ ಚರಾಸ್ಥಿಗಳಿವೆ.

ಇದರೊಂದಿಗೆ ಸುನಿಲ್ ಕುಮಾರ್ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆ ಹಾಗೂ ಇತರರಿಂದ 45.15 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ. ಇದರಲ್ಲಿ 15.10 ಲಕ್ಷ ರೂ. ಗೃಹ ಸಾಲವಾದರೆ, 17 ಲಕ್ಷ ಚಿನ್ನ ಸಾಲ ಹಾಗೂ 8.04 ಲಕ್ಷ ವಾಹನ ಸಾಲವು ಸೇರಿವೆ. ಆದರೆ ಪತ್ನಿ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದೆ.

ಸುನಿಲ್ ಕುಮಾರ್ ಅವರ ಕುಟುಂಬದ ಅವಲಂಬಿತರಲ್ಲಿ ತಂದೆ ಎಂ.ಕೆ. ವಾಸುದೇವ ಅವರಲ್ಲಿ 29.13 ಲಕ್ಷ ಮೌಲ್ಯದ ಚರಾಸ್ಥಿ ಇದೆ. 2017-18ನೇ ಸಾಲಿನಲ್ಲಿ 23.04 ಲಕ್ಷ ರೂ. ಇದ್ದ ಸುನಿಲ್ ಕುಮಾರ್ ಅವರ ಆದಾಯ ಪ್ರತಿವರ್ಷ ಏರುಗತಿಯಲ್ಲಿದ್ದು, 2021-22ನೇ ಸಾಲಿನಲ್ಲಿ ಅದು 51.46 ಲಕ್ಷ ರೂ. ಎಂದು ತೋರಿಸಲಾಗಿದೆ.

ಅದೇ ರೀತಿ ಅವರ ಪತ್ನಿ ಪ್ರಿಯಾಂಕ ಅವರ 2017-18ನೇ ಸಾಲಿನ ಆದಾಯ 11.26 ಲಕ್ಷ ರೂ.ಗಳಾಗಿದ್ದು, 2021- 22ನೇ ಸಾಲಿಗೆ ಅದು 24.76ಲಕ್ಷ ರೂ.ಗಳಿಗೆ ಏರಿಕೆ ಕಂಡಿದೆ.

ಮೂರು ಬಾರಿಯ ಕಾರ್ಕಳ ಶಾಸಕರ ವಿರುದ್ಧ ಬಂಟ್ವಾಳದ ಠಾಣೆಯಲ್ಲಿ ಒಂದು ಪ್ರಕರಣ (ಮೊಕದ್ದಮೆ ನಂ.16/2018) ಇದ್ದು, ಅದು 2018ರ ಜ.22ರಂದು ಕಲ್ಲಡ್ಕದಲ್ಲಿ ಸಾರ್ವಜನಿಕ ಭಾಷಣದ ವೇಳೆ ಕೋಮು ಸೌಹಾರ್ದತೆಗೆ ದಕ್ಕೆಯಾಗಿದೆ ಎಂದು ಆರೋಪದಲ್ಲಿ ತಿಳಿಸಲಾಗಿದೆ ಎಂದು ಅವರು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವತ್‌ನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!