ಉಡುಪಿ: ಮತದಾನದ ಕುರಿತ ಉಪನ್ಯಾಸ

ಉಡುಪಿ ಎ.19(ಉಡುಪಿ ಟೈಮ್ಸ್ ವರದಿ): ಮತದಾರರ ಸಾಕ್ಷರತಾ ಸಂಘ, ಐಕ್ಯೂಎಸಿ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಜಂಟಿ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡಿನ ಡಾ.ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಮತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ವೇಳೆ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿಯವರು ಮತದಾನದ ಮಹತ್ವದ ಕುರಿತು ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಮಾನದಂಡ, ಇಲ್ಲಿ ಮತದಾನವು ಪ್ರಜೆಗಳ ಅಸ್ತಿತ್ವವನ್ನುಎತ್ತಿಹಿಡಿಯುತ್ತದೆ. ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಳೆದ 75 ವರ್ಷಗಳಿಂದ ಮತದಾನದ ಪ್ರಮಾಣವನ್ನು ನೋಡಿದರೆ ಬೇಸರವಾಗುತ್ತದೆ. ಅದರಲ್ಲಿಯೂ, ವಿದ್ಯಾವಂತರಲ್ಲಿ ಮತ್ತು ಪಟ್ಟಣಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದು ವಿಷಾದನೀಯ. ಇತ್ತೀಚಿನ ದಿನಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳಿಂದ ಯುವ ಮತದಾರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸದೃಡ ಪ್ರಜಾಪ್ರಭುತ್ವ ಸ್ಥಾಪಿಸುವಲ್ಲಿ ಯುವಕರ ಪಾತ್ರ ಮುಖ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರದ ಪ್ರೊ.ಭಾಸ್ಕರ ಶೆಟ್ಟಿ ಎಸ್ ಅವರು ಮಾತನಾಡಿ, ಮತದಾನದಲ್ಲಿ ಬದುಕಿನ ಹಕ್ಕಿದೆ, ಅದನ್ನು ಉಳಿಸಿಕೊಳ್ಳಲು ಮತದಾರರು ಜಾಗೃತರಾಗಿ ಮತದಾನ ಮಾಡಬೇಕೆಂದರು.

ಇದೇ ವೇಳೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್ ಬಲ್ಲಾಳ್ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮತದಾರರ ಸಾಕ್ಷರತಾ ಸಂಘದ ಸಂಚಾಲಕ ಮಂಜುನಾಥ ಪ್ರಾಸ್ತವಿಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕರಾದ ಸೋಜನ್ ಕೆ.ಜಿ., ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಅಶೋಕ್ ಭಂಡಾರಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ರಾಜೇಂದ್ರ ಕೆ., ಉಪನ್ಯಾಸಕರಾದ ಡಾ. ರಾಮದಾಸ ಪ್ರಭು, ಸುಚಿತ್ರಾ, ನಾಗರಾಜ ಹೆಗ್ಗಡೆ, ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!