ಉಡುಪಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ನಾಮಪತ್ರ- ಪ್ರಣಾಳಿಕೆ ಬಿಡುಗಡೆ

ಉಡುಪಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಸಾದ್‌ರಾಜ್ ಕಾಂಚನ್ ಅವರು ಇಂದು ಸಹಸ್ರಾರು ಸಂಖ್ಯೆಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಹೊರಟು ಪಾದಯಾತ್ರೆಯ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರೊಂದಿಗೆ ಮಾಜಿ ಸಚಿವರು, ಕಾಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಸರಳಾ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದಿನಕರ್ ಹೇರೂರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಭವನದಲ್ಲಿ ಜರುಗಿದ ಸಭೆಯಲ್ಲಿ ಪ್ರಸಾದ್ ರಾಜ್ ಕಾಂಚನ್ ಅವರ ಪ್ರಣಾಳಿಕೆಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಿಡುಗಡೆ ಮಾಡಿದರು.ಈ ವೇಳೆ ಪಕ್ಷದ ನಾಯಕರಾದ ಪ್ರಖ್ಯಾತ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ವೆರೋನಿಕಾ ಕರ್ನೆಲಿಯೊ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ಪ್ರಮುಖ ಅಂಶಗಳು
• ಯುವ ಜನತೆಗೆ ಕ್ಷೇತ್ರದಲ್ಲೇ ಉದ್ಯೋಗ ಸಿಗುವ ಹಾಗೆ ಮಾಡಲು ಕೃಷಿ ಹಾಗೂ ಮೀನುಗಾರಿಕಾ ಉದ್ಯಮಕ್ಕೆ ವಿಶೇಷ ಉತ್ತೇಜನ,
• ಖಾಸಗಿ ಆಸ್ಪತ್ರೆಗಳಿಗೆ ಸರಿಸಮಾನವಾದ ವ್ಯವಸ್ಥೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒದಗಿಸುವುದು. ನಗರ ಭಾಗದಲ್ಲಿ ಹಲವಾರು ವರ್ಷಗಳಿಂದ ಪರಿಹಾರ ಕಾಣದ ಏಕವಿನ್ಯಾಸ ಪರವಾನಿಗೆ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಲು ವಿಶೇಷ ಪ್ರಯತ್ನ ಮಾಡುವುದು.
• ಎಲ್ಲಾ ಸರಕಾರಿ ಕಛೇರಿಗಳಲ್ಲಿ ಲಂಚದ ಹಾವಳಿ ತಡೆಗಟ್ಟಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಜನಸಾಮಾನ್ಯರಿಗೆ ಉತ್ತಮ, ತಂತ ಸೇವೆ ನೀಡುವುದು.
• ಮಲ್ಪೆ ಮೀನುಗಾರಿಕಾ ಬಂದರನ್ನು ವಿಶೇಷ ಆದ್ಯತೆಯ ಮೇರೆಗೆ ಅಭಿವೃದ್ಧಿಗೊಳಿಸುವುದು, ಮೀನುಗಾರಿಕಾ ಕಾಲೇಜನ್ನು ಹಾಗೂ ಉಡುಪಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡುವುದು ತನ್ನ ಆದ್ಯತೆಯಾಗಿದೆ.
• ದೈವದತ್ತವಾಗಿ ನಮಗೆ ಒದಗಿರುವ ಸಮುದ್ರ ತೀರದ ಕಾರಣ ಉತ್ತಮ ಪ್ರವಾಸೋದ್ಯಮ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡಲು ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುವುದು.
• ಕ್ಷೇತ್ರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಹಲವು ನೈಸರ್ಗಿಕ ತಾಣಗಳಿದ್ದು ಅವುಗಳನ್ನು ವಿಶೇಷ ಒತ್ತು ನೀಡಿ ಅಭಿವೃದ್ಧಿಪಡಿಸುವುದು. ಪ್ರವಾಸೋದ್ಯಮ ಬೆಳೆದರೆ ಔದ್ಯಮಿಕ ಹಾಗೂ ಉದ್ಯೋಗ ಈ ಎರಡು ಕ್ಷೇತ್ರಗಳು ಬೆಳೆದು ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುವುದೆಂಬುದು ನನ್ನ ನಂಬಿಕೆ.

* ಮಾಹಿತಿ ತಂತ್ರಜ್ಞಾನದ ಉದ್ಯಮಕ್ಕಾಗಿ ವಿಶೇಷ ಐ.ಟಿ. ಪಾರ್ಕ್ ಸ್ಥಾಪಿಸಿ ಸರಕಾರದಿಂದಲೂ ವಿಶೇಷ ಅನುದಾನ ತಂದು ಉಡುಪಿಯ ಯುವ ವಿದ್ಯಾವಂತ ಪ್ರತಿಭೆಗಳಿಗೆ ಉಡುಪಿಯಲ್ಲೇ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು.
• ಉಡುಪಿಯನ್ನು ಪರಿಸರಸ್ನೇಹಿ ಕ್ಷೇತ್ರವಾಗಿಡಲು ಸಾಧ್ಯವಾದಷ್ಟು ಮಾಲಿನ್ಯ ನಿವಾರಣೆಗೆ ಒತ್ತು ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
• ಸಂಪೂರ್ಣ ಒಳಚರಂಡಿ ದುರವಸ್ಥೆಯನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಬಾವಿ ನೀರು ಕಲಶವಾಗದಂತೆ ಕಾರ್ಯಕ್ರಮ ರೂಪಿಸುವುದಲ್ಲದೇ, ಈಗಾಗಲೇ ಕೆಟ್ಟು ಹೋದ ಬಾವಿಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದು.
• ಈಗಾಗಲೇ ಕಾಂಗ್ರೆಸ್ ಪಕ್ಷ ಕರಾವಳಿಗೆ ವಿಶೇಷ ಪ್ರಣಾಳಿಕೆ ಘೋಷಿಸಿದ್ದು ಅದರಲ್ಲಿದ್ದ ಅಂಶಗಳಿಗೆ ಪೂರಕವಾಗಿ ಉಡುಪಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು
• ಸೌಹಾರ್ದತೆಗೆ ಹೆಸರುವಾಸಿಯಾದ ಉಡುಪಿಯನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಿ ಸರ್ವತೋಮುಖ ಅಭಿವೃದ್ಧಿ ಮಾಡಿ ಬೆಳೆಸುವುದು ನನ್ನ ಗುರಿ ಆಗಿದೆ ಎಂದು ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಕನಸು ಮತ್ತು ಆಶಯ
• ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರುಜ್ಜೀವನ
• ಸರಕಾರಿ ಮೆಡಿಕಲ್ ಕಾಲೇಜು
• ಸರಕಾರಿ ಇಂಜಿನಿಯರಿಂಗ್ ಕಾಲೇಜು,
• ವಾರಾಹಿ ನೀರು ಕ್ರಮಬದ್ಧವಾಗಿ ಕೃಷಿಗೆ ಹಾಗೂ ಕುಡಿಯಲು ಎಲ್ಲಾ ಗ್ರಾಮಗಳಿಗೆ ಯೋಜನೆಅನುದಾನ
• ಸರಕಾರಿ ಕಡತಗಳ ಶೀಘ್ರ ವಿಲೇವಾರಿಗೆ 3 ತಿಂಗಳಿಗೊಮ್ಮೆ ಕಾರ್ಯ ಯೋಜನೆ
• ಬ್ರಹ್ಮಾವರ ಭಾಗದ ಒಳಚರಂಡಿ ಸಮಸ್ಯೆಗೆ ಸೂಕ್ತ ಪರಿಹಾರ.
• ಬ್ರಹ್ಮಾವರ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಎಲ್ಲಾ ಸೌಲಭ್ಯಗಳನ್ನೊದಗಿಸುವುದು. ಐಟಿ ಹಬ್ ರಚನೆ.
• ತಿಮ್ಮಣ್ಣ ಕುದ್ರು – ಬ್ರಹ್ಮಾವರ ಸಂಪರ್ಕ ಸೇತುವೆ.
• ಹೊನ್ನಾಳ – ಹಂಗಾರಕಟ್ಟೆ ಹಾಗೂ ಹೊನ್ನಾಳ ಬೆಂಗ್ರೆ ಸೇತುವೆ ರಚನೆ.
• ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಾಣ.
• ಜಾಂತಾರು ಕೆರೆ ಅಭಿವೃದ್ಧಿ ಹಾಗೂ ವಾಕಿಂಗ್ ಟ್ರ್ಯಾಕ್ ರಚನೆ.
• ಮಲ್ಪೆ ಮೀನುಗಾರಿಕಾ ಬಂದರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವುದು.

Leave a Reply

Your email address will not be published. Required fields are marked *

error: Content is protected !!