ರಾಗಿಣಿಗೆ 14 ದಿನ ಸೆರೆವಾಸ: ಸಂಜನಾ 3 ದಿನ ಪೊಲೀಸ್ ವಶಕ್ಕೆ
ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಸೇರಿ ಐವರನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಹೀಗಾಗಿ ಅವರು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.
ಇತ್ತ ಸಂಜನಾ ಅವರನ್ನು 3 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಅದರ ಅವಧಿ ಮುಗಿದಿದ್ದರಿಂದ ಆರೋಪಿಗಳನ್ನು ಸೋಮವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಆರೋಪಿಗಳಾದ ರಾಗಿಣಿ, ಪ್ರಶಾಂತ್ ರಂಕಾ, ಸಿಮೋನ್, ರಾಹುಲ್ ಹಾಗೂ ನಿಯಾಜ್ನನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಇದಾದ ನಂತರ, ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿಯೇ 14 ದಿನ ಆರೋಪಿಗಳು ಬಂಧನದಲ್ಲಿ ಇರಲಿದ್ದಾರೆ.
ಇತ್ತ ನಟಿ ಸಂಜನಾ ಅವರನ್ನು ಸೆ.16ರ ವರೆಗೆ ಪೊಲೀಸರಿಗೆ ಒಪ್ಪಿಸಿ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿತು. ಇವರೊಂದಿಗೆ ವಿರೇನ್ ಖನ್ನಾ, ರವಿಶಂಕರ್ ಎಂಬುವವರನ್ನು ಎರಡು ದಿನ ಪೊಲೀಸ್ ವಶಕ್ಕೆ ನೀಡಲಾಯಿತು.