ಅಶ್ಲೀಲ ಮೆಸೇಜ್ ಕಳುಹಿಸಿದ್ದ ಯುವಕನಿಗೆ ಧರ್ಮದೇಟು: ಪ್ರತಿ ದೂರು, ಮಹಿಳೆ ಸೇರಿ ನಾಲ್ವರ ಬಂಧನ

ಮಡಿಕೇರಿ: ಮಹಿಳೆಯೊಬ್ಬರಿಗೆ ಅಸಭ್ಯ ರೀತಿಯಲ್ಲಿ ಸಂದೇಶ ರವಾನಿಸುತ್ತಿದ್ದ ಆರೋಪದಡಿ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಯುವಕ ಸಹ ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಇತರ ನಾಲ್ವರನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಘಟನೆ ವಿವರ
ಮಡಿಕೇರಿಯ ಮೊಬೈಲ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಮಹಮ್ಮದ್ ಮುದಸ್ಸಿರ್ ಎಂಬ ಯುವಕ ನಗರದ ಬ್ಯೂಟಿ ಪಾರ್ಲರ್ ಒಂದರ ಮಾಲೀಕರಾದ ಮಹಿಳೆಗೆ ಅಸಭ್ಯ ರೀತಿಯ ಮೆಸೇಜ್‌ಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ಮಹಿಳೆ ತನ್ನ ಸಂಬಂಧಿಕರಾದ ಉಮೇಶ್ ಎಂಬವರಿಗೆ ಈ ವಿಷಯ ತಿಳಿಸಿದ್ದಾರೆ. ಉಮೇಶ್ ಅವರು ಕೊಡಗು ರಕ್ಷಣಾ ವೇದಿಕೆಯ ಸದಸ್ಯರೊಂದಿಗೆ ಸೇರಿಕೊಂಡು ಯುವಕನಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.

ಅದರಂತೆ ಆ ಮಹಿಳೆಯ ಮೊಬೈಲ್‌ ಮೂಲಕವೇ ‘ಹಳೇ ಆರ್‌ಟಿಒ ಕಚೇರಿ ಬಳಿಗೆ ಬಂದರೆ ಮಾತನಾಡೋಣ’ ಎಂಬ ಸಂದೇಶ ಕಳುಹಿಸಿದ್ದರು. ಅಲ್ಲಿಗೆ ಗುರುವಾರ ಸಂಜೆ ಬಂದ ಯುವಕನಿಗೆ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಮಹಿಳೆ ಥಳಿಸಿದ್ದಾರೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈಗ ಥಳಿಸಿದವರು ಮೇಲೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!