ಬೆಲೆ ಏರಿಕೆ ಬವಣೆಯಲ್ಲಿ ಟೋಲ್ ದರೋಡೆಯ ಬರೆ- ಡಿಕೆಶಿ

ಬೆಂಗಳೂರು: ಇತ್ತೀಚಿಗೆ ಸಾರ್ವಜನಿಕರ ಸೇವೆಗೆ ಮುಕ್ತವಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಟೋಲ್ ಸಂಗ್ರಹಕ್ಕೆ ಪ್ರತಿಭಟನೆ, ವಿರೋಧ ವ್ಯಕ್ತವಾಗುತ್ತಿದ್ದು, ಬಿಡದಿಯಿಂದ ರಾಮನಗರಕ್ಕೆ ತೆರಳಲು ರೂ.135 ಟೋಲ್ ಕೊಡಬೇಕಂತೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ಬೆಂಗಳೂರು – ಮೈಸೂರು ಟೋಲ್‌ ಕೇಂದ್ರದ ಬಳಿ ಜನ ಆಕ್ರೋಶ ವ್ಯಕ್ತಪಡಿಸಿದ್ದನ್ನು ಬೆಳಗಿನಿಂದ ಟಿವಿ, ಪತ್ರಿಕೆಯಲ್ಲಿ ನೋಡಿದ್ದೆ. ಇಂದು ಬಿಡದಿಯಿಂದ ರಾಮನಗರಕ್ಕೆ ತೆರಳುವ ವೇಳೆ ನನಗೂ ಅನುಭವಕ್ಕೂ ಬಂತು. ಬಿಡದಿಯಿಂದ ರಾಮನಗರಕ್ಕೆ ತೆರಳಲು ₹135 ಟೋಲ್‌ ಕೊಡಬೇಕಂತೆ, ಫಾಸ್ಟ್‌ಟ್ಯಾಗ್‌ ಸ್ಕ್ಯಾನರ್‌ ತೊಂದರೆ ನೆಪ ಹೇಳಿ ರೂ. 270 ವಸೂಲಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ರಸ್ತೆ ನಿರ್ಮಿಸಿದ್ದು ಜನರ ಹಣದಲ್ಲೇ, ಓಡಾಡುವ ವಾಹನವೂ ಜನರದ್ದೇ, ಟೋಲ್ ಹಣ ನೀಡಬೇಕಾದವರೂ ಜನರೇ. ಪ್ರಚಾರ ಮಾತ್ರ ಕೈಬೀಸಿ ಹೋಗುವ ಮೋದಿಯದ್ದು! ಬೆಲೆ ಏರಿಕೆಯಲ್ಲಿ ಬವಣೆಯಲ್ಲಿ ಟೋಲ್ ಬರೆ ಹಾಕಿದ ಬಿಜೆಪಿಯ ಹೆದ್ದಾರಿ ದರೋಡೆ ವಿರುದ್ಧ ಇದು ನಿಜವಾದ ಜನಧ್ವನಿ. ಈ ಜನಕ್ರೋಶಕ್ಕೆ ಬಿಜೆಪಿ ಭಸ್ಮವಾಗುವುದು ನಿಶ್ಚಿತ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. 

ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಹಾಗೂ ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ. ಇಂದು ಬೆಳಗ್ಗೆ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾದ ಕೂಡಲೇ ಕಾಂಗ್ರೆಸ್, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು,  ಟೋಲ್ ಗೇಟ್ ಮುರಿದು ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!