ಉಡುಪಿ: ಮಾ.17 ರಂದು ಅಗ್ರಿಗೋಲ್ಡ್ ನ ಗ್ರಾಹಕರು-ಏಜೆಂಟ್’ಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಉಡುಪಿ ಮಾ.14(ಉಡುಪಿ ಟೈಮ್ಸ್ ವರದಿ): ಅಗ್ರಿಗೋಲ್ಡ್ ನ ಗ್ರಾಹಕರು ಮತ್ತು ಏಜೆಂಟ್ ಗಳ ಬೇಡಿಕೆಗಳನ್ನು ಸರಕಾರದ ಮುಂದಿಡುವ ಸಲುವಾಗಿ ಮಾ.17 ರಂದು ಬೃಹತ್ ಜಾಥವನ್ನು ಮಣಿಪಾಲ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಆಯೋಜಿಸಲಾಗಿದೆ ಎಂದು ಅಗ್ರಿಗೋಲ್ಡ್ ನ ಕಸ್ಟಮರ್ ಆ್ಯಂಡ್ ಏಜೆಂಟ್ ವೆಲ್ಫೇರ್ ಅಸೋಸಿಯೇಶನ್ ಹೇಳಿದೆ.

ಈ ಬಗ್ಗೆ ಅಸೋಸಿಯೇಶನ್ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, 2015ರ ಜುಲೈನಲ್ಲಿ ಹೈದರಬಾದ್ ಹೈಕೋರ್ಟಿನಲ್ಲಿ ಅಗ್ರಿ ಗೋಲ್ಡ್ ಸಂಸ್ಥೆ ದಾವೆ ಹೂಡಿದ್ದು ಆಕ್ಟೋಬರ್‌ನಲ್ಲಿ ಮಧ್ಯಾಂತರ ಆದೇಶವಾಗಿತ್ತು. ಕರ್ನಾಟಕ, ಆಂಧ್ರ, ತೆಲಂಗಾಣ, ಮತ್ತು ಇತರ ರಾಜ್ಯದ ಸ್ಥಿರ ಹಾಗೂ ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿದ್ದು ಈಗ ಈ ದಾವೆಯನ್ನು ಹಾಗೂ ಇತರ ಎಲ್ಲಾ ರಾಜ್ಯಗಳ ವಿಶೇಷ ನ್ಯಾಯಲಯಗಳಲ್ಲಿ ಇರುವ ದಾವೆಗಳನ್ನು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಎಲ್ಲೂರು(ಆಂಧ್ರಪ್ರದೇಶ) ಜಿಲ್ಲಾ ನ್ಯಾಯಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ನಮ್ಮ ಕರ್ನಾಟಕ ಸರಕಾರವು ಎಲ್ಲೂರು ಜಿಲ್ಲಾನ್ಯಾಯಲಯಕ್ಕೆ ಕರ್ನಾಟಕದ ಗ್ರಾಹಕರ ಪರವಾಗಿ ಅಫಿದಾವೆತ್‌ ಸಲ್ಲಿಸಬೇಕಾಗಿದೆ. ಆದರೆ ಕರ್ನಾಟಕ ಸರಕಾರದ ಅಧಿಕಾರಿಗಳು ಆಮೆ ಗತಿಯಲ್ಲಿ ಕೆಲಸ ಮಾಡಿಕೊಂಡು ಕರ್ನಾಟಕ ಗ್ರಾಹಕರ ನೋವುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕರ್ನಾಟಕ ಸಿಐಡಿ ಇಲಾಖೆಯ ವರದಿ ಪ್ರಕಾರ ಅಗ್ರಿಗೋಲ್ಡ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿರುವ ಗ್ರಾಹಕರು ಸುಮಾರು 8,14,178 ಮಂದಿ ಅದೇ ರೀತಿ ಏಜೆಂಟುಗಳು ಸುಮಾರು 2ಲಕ್ಷ ಅಧಿಕ ಕರ್ನಾಟಕದಲ್ಲಿದ್ದು ರಾಜ್ಯದಲ್ಲಿ ಹೂಡಿಕೆಯ ಒಟ್ಟು ಸರಿ ಸುಮಾರು 1,850 ಕೋ.ರೂ. ಆಗಿರುತ್ತದೆ ಎಂದು ತಿಳಿಸಲಾಗಿದೆ.

ಆಂದ್ರಸರಕಾರವು ಅಗ್ರಿಗೋಲ್ಡ್ ಆತ್ಮಹತ್ಯೆ ಮಾಡಿದ ಏಜೆಂಟ್‌ಗಳ ಕುಟುಂಬಕ್ಕೆ ತಲಾ 5ಲಕ್ಷ ರೂ. ಕೊಟ್ಟಿದ್ದು ಹಾಗೂ 1,300 ಕೋಟಿ ಬಿಡುಗಡೆ ಮಾಡಿ ಗ್ರಾಹಕರಿಗೆ ಕೊಟ್ಟಿರುತ್ತಾರೆ. ಆಂಧ್ರಪ್ರದೇಶದ ಸರಕಾರವು ಅವರ ರಾಜ್ಯದ ಗ್ರಾಹಕರ ಪರವಾಗಿ ಕೆಲಸ ಮಾಡುತ್ತಿದೆ. ಹಾಗೂ ಪಶ್ಚಿಮ ಬಂಗಾಳದ ಶಾರದ ಚಿಟ್ ಫಂಡ್ ಹಗರಣದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಮಮತ ಬ್ಯಾನರ್ಜಿಯವರು ಗ್ರಾಹಕರ ಸಂಕಷ್ಟಕ್ಕೆ ಸ್ಪಂದಿಸಿ ಸಾವಿರಾರು ಕೋಟಿ ಬಿಡುಗಡೆ ಮಾಡಿ ಗ್ರಾಹಕರಿಗೆ ಕೊಟ್ಟಿರುತ್ತಾರೆ. ಇದೇ ರೀತಿ ಕರ್ಣಟಕ ಸರಕಾರವು ಕೂಡ ನೊಂದ ಗ್ರಾಹಕರಿಗೆ ಸ್ಪಂದಿಸಿ ಸಮಸ್ಯೆ ಇತ್ಯಾರ್ಥಕ್ಕಾಗಿ ಹಣ ಬಿಡುಗಡೆ ಮಾಡಬೇಕಾಗಿ ಮನವಿ ಮಾಡಿ ಕೊಳ್ಳಲಾಗಿದೆ. ಹಾಗೂ ಸರಕಾರವು ಕೂಡಲೆ ಈ ಬಗ್ಗೆ ಸ್ಪಂದಿಸದಿದ್ದರೆ ಮುಂದೆ ಬರುವ ಚುನಾವಣೆಯನ್ನು ಬಹಿಷ್ಕರಿಸಲಾಗುವುದೆಂದು ಎಚ್ಚರಿಸಲಾಗಿದೆ.

ಅಸೋಸಿಯೇಶನ್ ನ ಬೇಡಿಕೆಗಳು ಹೀಗಿವೆ….. ಕರ್ನಾಟಕ ಸಿ.ಐ.ಡಿ, ಇಲಾಖೆಯ ksp.gov.in ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಗ್ರಾಹಕರ ಮಾಹಿತಿಯಲ್ಲಿ ಸುಮಾರು ಶೇ 40% ರಷ್ಟು ಗ್ರಾಹಕ ಖಾತೆಗಳು ಕಾಣೆಯಾಗಿದೆ. ಇದರ ಹಿಂದೆ ವ್ಯವಸ್ಥಿತ ಜಾಲವೊಂದರ ಕೈವಾಡವಿರುವುದು ಸ್ಪಷ್ಟವಾಗಿರುವುದರಿಂದ ಕೂಡಲೇ ಸ್ಪಂದಿಸಿ ಈ ಮೂಲಕ ಮಾಹಿತಿ (original Pata) ಯನ್ನು ಪಟಿಸುವಂತೆ ಕ್ರಮ ಕೈಗೊಳ್ಳಬೇಕು.

ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ದಕ್ಷ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಸಹಕರಿಸುವ ಅಧಿಕಾರಿಯನ್ನು ನೇಮಿಸಬೇಕು. ಹಾಗೂ ಅಗ್ರಿಗೋಲ್ಡ್ ಕಂಪೆನಿಯ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಲು ಆಂಧ್ರಪ್ರದೇಶದ ನ್ಯಾಯಾಲಯವು ಕೈಗೊಂಡಿರುವ ಕ್ರಮಗಳಂತೆ ಕರ್ನಾಟಕದಲ್ಲಿನ ಆಸ್ತಿಗಳನ್ನು ಸಹ ಮಾರಾಟ ಮಾಡಿ ಗ್ರಾಹಕರಿಗೆ ಹಣ ನೀಡಬೇಕು.

ಕರ್ನಾಟಕದ ಅಗ್ರಿಗೋಲ್ಡ್‌ ಕಂಪೆನಿಯ ಆಸ್ತಿಗಳಾದ ಸ್ಥಿರ ಮತ್ತು ಬೇನಾಮಿ ವಿವರದ ಪಟ್ಟಿಯನ್ನು ಪ್ರಕಟಿಸಬೇಕು. ಹಾಗೂ ಆಂಧ್ರಪ್ರದೇಶ ಸರ್ಕಾರದ ಆದೇಶದಂತೆ ನಮ್ಮ ಕರ್ನಾಟಕದಲ್ಲಿಯೂ ಸಹ ಮರಣಹೊಂದಿದ ಅಧಿಕ ಮಂದಿ ಅಗ್ರಿಗೋಲ್ಡ್ ಏಜೆಂಟರ ಕುಟುಂಬ ಸದಸ್ಯರಿಗೆ ಕನಿಷ್ಟ 5ಲಕ್ಷ ರೂಗಳ ಪರಿಹಾರ ಧನ ಹೆಚ್ಚುವರಿ ಪರಿಹಾರಧನವನ್ನು ಕೂಡಲೇ ಮಂಜೂರು ಮಾಡಬೇಕು. ಇದರೊಂದಿಗೆ ರಶೀದಿ, ಬಾಂಡ್ ಕಳೆದುಕೊಂಡವರಿಗೆ ನಕಲು ಪ್ರತಿ ಕೊಡಬೇಕು. ಮರಣ ಹೊಂದಿದವರ ನಾಮಿನಿ ಸದಸ್ಯರ ಕುಟುಂಬಕ್ಕೆ ಹಣ ನೀಡುವಂತೆ ಮಾಡಬೇಕು.

1 thought on “ಉಡುಪಿ: ಮಾ.17 ರಂದು ಅಗ್ರಿಗೋಲ್ಡ್ ನ ಗ್ರಾಹಕರು-ಏಜೆಂಟ್’ಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Leave a Reply

Your email address will not be published. Required fields are marked *

error: Content is protected !!