ಕಲಾವಿದರ ಗೂಡಾದ ಕೊಡವೂರು ಬೀಡಾಗಲಿ: ಜಯರಾಜ್ ಕಾಂಚನ್

ಉಡುಪಿ: ಸುಮಧುರ ಮನಸ್ಸಿನ ಎಲ್ಲರ ಸುಮನಸಾ ಸಂಸ್ಥೆಯು ಕೊಡವೂರಿನಲ್ಲಿ ಕಲಾವಿದರ ಗೂಡು ಕಟ್ಟಿದೆ. ಈ ಗೂಡು ಬೀಡಾಗಿ ಬೆಳೆಯಲಿ ಎಂದು ಹಿರಿಯ ನಾಟಕಕಾರ ಜಯರಾಜ್ ಎಸ್. ಕಾಂಚನ್ ಹೇಳಿದರು.

ಸಾಂಸ್ಕøತಿಕ ಸಂಘಟನೆ ಸುಮನಸಾ ಕೊಡವೂರು ವತಿಯಿಂದ ಅಜ್ಜರಕಾಡು ಭುಜಂಗಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ರಂಗಹಬ್ಬ-11 ಇದರ ಎರಡನೇ ದಿನದ ಕಾರ್ಯಕ್ರಮದಲ್ಲಿ ರಂಗಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಹಳ ಸಂಸ್ಥೆಗಳು ಹುಟ್ಟುತ್ತವೆ. ಆರಂಭಶೂರತ್ವ ತೋರಿಸುತ್ತವೆ. ಬಳಿಕ ಮುನ್ನಡೆಯುವುದಿಲ್ಲ. ಆದರೆ ಸುಮನಸಾ ಸಂಸ್ಥೆ ಈ ರೀತಿಯಾಗದೇ ಎಲ್ಲ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ ಧೀರ ಕಲಾವಿದರನ್ನು ಸೃಷ್ಟಿಸಿ 21 ವರ್ಷಗಳಿಂದ ಮುಂದೆ ಸಾಗುತ್ತಿದೆ ಎಂದು ಅವರು ಶ್ಲಾಘಿಸಿದರು.

ಹೋಟೆಲ್ ಉದ್ಯಮಿ, ಕಲಾಪೋಷಕ ಟಿ. ರವೀಮದ್ರ ಪೂಜಾರಿ ಮಾತನಾಡಿ, ಸುಮನಸಾ ಸಂಸ್ಥೆಯು ಕೇವಲ ತನ್ನ ನಾಟಕಗಳನ್ನು ಪ್ರದರ್ಶಿಸುವುದಲ್ಲ. ರಾಜ್ಯ, ಬೇರೆ ರಾಜ್ಯಗಳ ತಂಡಗಳನ್ನು ಕರೆಸಿ ಅವರ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಇಲ್ಲಿನ ಪ್ರೇಕ್ಷಕರಿಗೆ ಆ ಕಲೆಯನ್ನು ನೋಡುವ ಅವಕಾಶವನ್ನು ಮಾಡಿಕೊಡುತ್ತದೆ, ಅದೇ ರೀತಿ ಈ ಕ್ಷೇತ್ರದಲ್ಲಿ ಸಾಶಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿದೆ. ಈ ಸಂಸ್ಥೆಯ ಮೂಲಕ ಇನ್ನಷ್ಟು ಕಲಾವಿದರು ಹುಟ್ಟಲಿ. ಅದೇ ರೀತಿ ಪೋಷಕರು ಕೂಡ ನಿರಂತರ ಪ್ರೋತ್ಸಾಹ ನೀಡಲಿ ಎಂದು ಹಾರೈಸಿದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ, ಜೀವನದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿರುವ ಸುಮನಸಾ ಸಂಸ್ಥೆಯು ಯುವಪೀಳಿಗೆಯನ್ನೂ ಈ ಕ್ಷೇತ್ರಕ್ಕೆ ಕರೆದುಕೊಂಡು ಬರುತ್ತಿದೆ. ಖಾಲಿ ಮನಸ್ಸು ಹಾಳು ಯೋಚನೆಗಳಿಗೆ ಕಾರಣವಾಗುತ್ತದೆ. ಹಾಗಾಗದಂತೆ ಈ ಸಂಸ್ಥೆ ನೋಡಿಕೊಂಡಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿಸಿ ಗುಜ್ಜರಬೆಟ್ಟು ಹಯವದನ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಮನಸಾದ ಚಿಂತನೆ, ರಂಗಕಾರ್ಯಗಳು, ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾದುದು. ಹೊಸತನವನ್ನು ನಿರಂತರ ನೀಡುತ್ತಾ ಬಂದಿದೆ. ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದೆ ಎಂದರು.

ಕಲಾ ಪೋಷಕ ಶ್ರೀನಿವಾಸ ಬಾಯರಿ, ಸುಮನಸಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಪ್ರವೀಣ್‍ಚಂದ್ರ ತೋನ್ಸೆ ಉಪಸ್ಥಿತರಿದ್ದರು. ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿದರು. ಅಶೋಕ ಅಮ್ಮುಂಜೆ ವಂದಿಸಿದರು. ಗಣೇಶ್ ಸಗ್ರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!