ಕೊರಗರ ಕುಲದೈವ ಕೊರಗ ತನಿಯವೇ ಹೊರತು ಕೊರಗ ಅಜ್ಜ ಅಲ್ಲ- ಭಾಷಾ ತಜ್ಞ ಬಾಬು ಪಾಂಗಾಳ

ಉಡುಪಿ: ಕೊರಗರ ಕುಲದೈವ ಕೊರಗ ತನಿಯವೇ ಹೊರತು ಕೊರಗ ಅಜ್ಜ ಅಲ್ಲ. ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ. ಬಾರಕೂರಿನಲ್ಲಿರುವ ಕೊಗ್ರೆಪಾಡಿ ಕೊರಗ ತನಿಯರ ಜನ್ಮಸ್ಥಳವಾಗಿದೆ. ಇದು ಇಂದಿನ ಕೂರಾಡಿ ಆಗಿರ ಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕು. ಮುಂದೆ ಈ ಸ್ಥಳವನ್ನು ಗುರುತಿಸಿ ಅಭಿವೃದ್ಧಿ ಪಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ಹೇಳಿದರು.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ ಉಡುಪಿ ಪುತ್ತೂರಿನಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಇಡೀ ಕೊರಗ ಸಮುದಾಯ ಉಳಿಯಬೇಕಾದರೆ ಕೊರಗರ ಕೆಲವೊಂದು ಅಸ್ಮಿತೆಯನ್ನು ನಾವು ಸ್ಥಾಪನೆ ಮಾಡಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಥೀಮ್ ಪಾರ್ಕ್ ಮಾದರಿಯಲ್ಲಿ ಸುಮಾರು 30-40 ಎಕರೆ ಜಾಗದಲ್ಲಿ ಕೊರಗ ಪಾರ್ಕ್ ನಿರ್ಮಾಣ ಮಾಡಬೇಕು. ಅದರಲ್ಲಿ ಕಾಡು, ಕೊರಗರ ಕುಟುಂಬಗಳ ವಾಸ, ತರಬೇತಿ ಕೇಂದ್ರಗಳು, ಕೊರಗರ ಬಗ್ಗೆ ಅಧ್ಯಯನ ಮಾಡುವಂತಹ ಪುಸ್ತಕ, ಪ್ರಾಚೀನ ಪರೀಕಗಳು. ಗ್ರಂಥಾಲಯಗಳು ಇರಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ತಿಳಿಸಿದರು.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಕೊರಗ ಸಮುದಾಯದ ಮಕ್ಕಳು ಪರಿಶಿಷ್ಟ ಪಂಗಡದ ಇತರ ಮಕ್ಕಳ ಜೊತೆ ಕೂಡ ಸ್ಪರ್ಧೆ ಮಾಡಲು ಇಂದಿಗೂ ಆಗುತ್ತಿಲ್ಲ. ಆದುದರಿಂದ ಈ ಸಮುದಾಯಕ್ಕೆ ಒಳ ಮೀಸಲಾತಿಗಿಂತ ಪರಿಶಿಷ್ಟ ಪಂಗಡದಲ್ಲಿಯೇ ಪ್ರಾಚೀನ ಬುಡಕಟ್ಟು ಎಂಬುದಾಗಿ ಪ್ರತ್ಯೇಕ ಮಾಡಿ ಮೀಸಲಾತಿ ನೀಡಬೇಕಾಗಿದೆ. ಇದರಿಂದ ಕೊರಗ ಮಕ್ಕಳಿಗೆ ಹೆಚ್ಚಿನ ಅನುಕೂಲ ದೊರೆಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಕೊರಗ ಸಮುದಾಯ ಪರಿಶಿಷ್ಟ ಪಂಗಡದಲ್ಲಿದ್ದರೂ ಕಟ್ಟಕಡೆಯ ಸಮುದಾಯವಾಗಿ ಬಹಳಷ್ಟು ನೋವು ಅನುಭವಿಸಿದೆ. ಪರಿಶಿಷ್ಟ ಪಂಗಡದ ಹೆಚ್ಚಿನವರಿಗೆ ಈಗಾಗಲೇ ಶಿಕ್ಷಣ, ಉದ್ಯೋಗ ದೊರೆಕಿದೆ. ಆದರೆ ಇನ್ನು ಸರಿಯಾಗಿ ಮೀಸ ಲಾತಿ ಸೌಲಭ್ಯ ದೊರೆಯದ ಕೊರಗ ಸಮುದಾಯಕ್ಕೆ ಇನ್ನಷ್ಟು ಆದ್ಯತೆ ಕೊಡಬೇಕಾಗಿದೆ. ಸರಕಾರ ಈ ಬದಲಾವಣೆ ಬಗ್ಗೆ ತೀರ್ಮಾನ ಮಾಡಬೇಕು. ಅಲ್ಲದೆ ಇದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಉಳಿದ ಸಮುದಾಯದವರು ಕೂಡ ಕೈಜೋಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Leave a Reply

Your email address will not be published. Required fields are marked *

error: Content is protected !!