ವೋಟು ಜೊತೆಗೆ ನೋಟು ನೀಡಿ ಬೆಂಬಲಿಸಿ- ಮತದಾರರಿಗೆ ಪ್ರಮೋದ್ ಮುತಾಲಿಕ್ ಮನವಿ

ಕಾರ್ಕಳ ಫೆ.9: ನನ್ನಲ್ಲಿ ದುಡ್ಡಿಲ್ಲ. ಹಾಗಾಗಿ ಮತದಾರರು ವೋಟು ಜೊತೆಗೆ ನೋಟು ನೀಡಿ ನನ್ನನ್ನು ಬೆಂಬಲಿಸಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ.

ಇಂದು ಕಾರ್ಕಳದ ಪರಪುವಿನಲ್ಲಿ ಪಾಂಚಜನ್ಯ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು  ಕರ್ನಾಟಕದಲ್ಲಿ ಬಹಳಷ್ಟು ಜನ ನನಗೆ ಬೆಂಬಲವಾಗಿ ನಿಂತಿದ್ದಾರೆ. ನೀವು ಸ್ಪರ್ಧೆಗೆ ಆಯ್ಕೆ ಮಾಡಿರುವ ಕ್ಷೇತ್ರ ಯೋಗ್ಯವಾಗಿದೆ. ಎಲ್ಲ ರೀತಿಯಿಂದಲೂ ನಾವು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಕಾರ್ಕಳ ಬಂದಿದ್ದಾರೆ. ಅವರ ಊಟ, ವಾಹನ ಖರ್ಚು ಇವೆಲ್ಲದರ ಖರ್ಚು ತುಂಬಲು ಹಣದ ಅವಶ್ಯಕತೆಯಿದೆ ಎಂದು ಹೇಳಿದರು.

ಹಿಂದುತ್ವದ ಉಳಿವು, ಪ್ರಾಮಾಣಿಕ ಅಭಿವೃದ್ಧಿ, ರಾಜಕೀಯ ವೈಚಿತ್ರ ನಿವಾರಿಸುವ ಸಲುವಾಗಿ ರಾಷ್ಟ್ರೀಯತೆ, ದೇಶಭಕ್ತಿ ಏನೆಂಬುದು ತೋರಿಸಿ ಕೊಡುವ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ರಾಜ್ಯದ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆ ವತಿಯಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.

ಎಸ್‍ಡಿಪಿಐ ದೇಶದ್ರೋಹಿಗಳ ಸಂಘಟನೆ ಎಂದ ಅವರು, ಅದೊಂದು ದೇಶದ್ರೋಹಿಗಳ, ಕೊಲೆಗಡುಕರ ಪಕ್ಷ, ಎಸ್‍ಡಿಪಿಐ ಅನ್ನು ಬ್ಯಾನ್ ಮಾಡುವಂತೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಅವರ ಸ್ಪರ್ಧೆಯಿಂದ ಯಾರಿಗೆ ಲಾಭ ಅನ್ನವುದು ಎಲ್ಲರಿಗೂ ತಿಳಿದ ವಿಚಾರ. ಪರೋಕ್ಷವಾಗಿ ಯಾರು ಅವರಿಗೆ ಸಹಕಾರ ಕೊಡುತ್ತಾರೆ. ಅನ್ನುವುದು ಗೊತ್ತಿದೆ ಎಂದರು ಹಾಗೂ ಗೋ ಕಳ್ಳತನ ನಿಲ್ಲುವವರೆಗೆ, ಮುಂದಿನ ದಿನಗಳಲ್ಲಿ ಗೋ ಕಳ್ಳರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಕಾರ್ಯ, ಪ್ರಾಮಾಣಿಕತೆ ಬಗ್ಗೆ ಮಾತನಾಡಬೇಕೆ ಹೊರತು ಬೇರೆ ಪಕ್ಷ, ಅವರ ಅಭ್ಯರ್ಥಿ ಬಗ್ಗೆ ಮಾತನಾಡಬಾರದು. ಜನ ಇದನ್ನು ಒಪ್ಪುವುದಿಲ್ಲ ಎಂದರು. ಇದೇ ವೇಳೆ ಕೇಂದ್ರ ಸರಕಾರದ ಅನುದಾನದಿಂದಾಗಿ ಈ ಭಾಗದ ರಸ್ತೆಗಳು ಉತ್ತಮವಾಗಿದೆ. ಅದಕ್ಕಾಗಿ ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ರಾಜ್ಯ ಸರಕಾರದಿಂದ ಕಾರ್ಕಳದಲ್ಲಿ ರಸ್ತೆ ನಿರ್ಮಾಣಕ್ಕೆ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ಕ್ಷೇತ್ರದ ಶಾಸಕರು ಮಾಹಿತಿ ನೀಡಬೇಕಾಗಿದೆ. ಏಕೆಂದರೆ ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಇನ್ನೂ ದುಸ್ತರವಾಗಿದ್ದು ಜನಸಾಮಾನ್ಯರ ಸಂಚಾರಕ್ಕೆ ಕುತ್ತಾಗಿದೆ. ರಾಜ್ಯ ಸರಕಾರದ ಅನುದಾನದಿಂದ ಯಾವ್ಯಾವ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಂಡಿದೆ ಎನ್ನುವುದನ್ನು ಕ್ಷೇತ್ರದ ಶಾಸಕರು ಬಹಿರಂಗಪಡಿಸಬೇಕೆಂದು ಮುತಾಲಿಕ್ ಪ್ರಶ್ನಿಸಿದರು.

ಚುನಾವಣಾ ಕಣದಿಂದ ಹಿಂದೆ ಸರಿಯಲು ಏನಾದರೂ ಒತ್ತಡವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತ ಇಲ್ಲ, ಹಳ್ಳಿ ಹಳ್ಳಿಯಲ್ಲಿ ನನಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿ, ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ನ್ಯಾಯವಾದಿ ಹರೀಶ್ ಅಧಿಕಾರಿ, ಪುರಸಭಾ ಸದಸ್ಯ ಲಕ್ಷ್ಮೀ ನಾರಾಯಣ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!