15 ಸಾವಿರ ಶಿಕ್ಷಕರ ನೇಮಕಾತಿ: ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಇಂದು ರದ್ದುಗೊಳಿಸಿ ಆದೇಶಿಸಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಅಭ್ಯರ್ಥಿಗಳ ಆಯ್ಕೆ ವೇಳೆ ಶಿಕ್ಷಣ ಇಲಾಖೆ, ಮಹಿಳಾ ಅಭ್ಯರ್ಥಿಗಳ ಪತಿಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಿದ್ದು, ಇದರಿಂದ ಹಲವು ಅಭ್ಯರ್ಥಿಗಳು ರಿಜೆಕ್ಟ್ ಆಗಿದ್ದರು. ಇದನ್ನು ಪ್ರಶ್ನಿಸಿ ನೂರಾರು ಅಭ್ಯರ್ಥಿಗಳು ರಿಟ್ ಅರ್ಜಿ ಸಲ್ಲಿಸಿದ್ದರು ಮತ್ತು ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈಗ ಪ್ರಕಟಿಸಲಾಗಿರುವ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದು, ಅಭ್ಯರ್ಥಿ ತಂದೆಯ ಜಾತಿ, ಆದಾಯ ಪ್ರಮಾಣಪತ್ರ ಆಧರಿಸಿ ಹೊಸದಾಗಿ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಆದೇಶಿಸಿದೆ.