ಚೀನಾ ಸೇನೆಯಿಂದಲೇ ಮೊದಲು ಗುಂಡಿನ ದಾಳಿಯಾಗಿದ್ದು: ಭಾರತೀಯ ಸೇನೆ
ನವದೆಹಲಿ: ಮೊದಲು ಭಾರತ ಅಲ್ಲ..ಚೀನಾ ಸೈನಿಕರೇ ಗುಂಡಿನ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ.
ಅತ್ತ ಚೀನಾ ಸೇನೆ ಎಲ್ಎಸಿಯಲ್ಲಿ ಭಾರತೀಯ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ಬೆನ್ನಲ್ಲೇ ಇತ್ತ ಭಾರತೀಯ ಸೇನೆ ಈ ಬಗ್ಗೆ ಪ್ರಕಟಣೆ ನೀಡಿ ಸ್ಪಷ್ಟನೆ ನೀಡಿದೆ. ‘ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಾವುದೇ ಹಂತದಲ್ಲಿಯೂ ಯಥಾಸ್ಥಿತಿ ಬದಲಾಯಿಸಲು ಯತ್ನಿಸಿಲ್ಲ. ಗುಂಡಿನ ದಾಳಿ ಸೇರಿದಂತೆ ಯಾವುದೇ ರೀತಿಯ ಆಕ್ರಮಣಕಾರಿ ವರ್ತನೆ ತೋರಿಲ್ಲ. ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ವಿಚಾರಕ್ಕೆ ಭಾರತ ಬದ್ಧವಾಗಿದ್ದರೆ ಚೀನಾ ಸೇನೆಯು ಪ್ರಚೋದನಾಕಾರಿ ಚಟುವಟಿಕೆಗಳನ್ನು ಮುಂದುವರಿಸಿದೆ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಭಾರತ–ಚೀನಾ ಸೇನಾಪಡೆಗಳ ಮಧ್ಯೆ ಸೋಮವಾರ ರಾತ್ರಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿತ್ತು. ಭಾರತೀಯ ಸೇನೆ ನಡೆಸಿದ ‘ಎಚ್ಚರಿಕೆ ದಾಳಿ (ವಾರ್ನಿಂಗ್ ಶಾಟ್)’ಗೆ ಪ್ರತಿಯಾಗಿ ನಾವು ದಾಳಿ ನಡೆಸಬೇಕಾಯಿತು ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಹೇಳಿತ್ತು. ಅಲ್ಲದೆ ಇದೇ ವಿಚಾರವಾಗಿ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಕೂಡ ವರದಿ ಬಿತ್ತರಿಸಿತ್ತು. ಆದರೆ ಇದನ್ನು ಭಾರತೀಯ ಸೇನೆ ನಿರಾಕರಿಸಿದೆ. ಸೋಮವಾರ ರಾತ್ರಿ ಚೀನಾ ಪಡೆಗಳು ಎಲ್‌ಎಸಿಯ ಮುಂಚೂಣಿ ನೆಲೆಗಳತ್ತ ಬರಲು ಯತ್ನಿಸಿದವು. ಭಾರತದ ಪಡೆಗಳು ಅದನ್ನು ತಡೆಯಲೆತ್ನಿಸಿದವು. ಆಗ ಭಾರತ ಪಡೆಗಳಲ್ಲಿ ಭೀತಿ ಮೂಡಿಸಲು ಚೀನಾ ಸೇನೆಯು ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿತ್ತು ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ. ಸೇನೆ, ರಾಜತಾಂತ್ರಿಕ ಮತ್ತು ರಾಜಕೀಯ ಮಟ್ಟದಲ್ಲಿ ಮಾತುಕತೆ ಪ್ರಗತಿಯಲ್ಲಿ ಇರುವಾಗ ಚೀನಾ ಸೇನೆಯು ಒಪ್ಪಂದಗಳನ್ನು ಉಲ್ಲಂಘಿಸಿ ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸುತ್ತಿದೆ ಎಂದೂ ಭಾರತೀಯ ಸೇನೆ ಆರೋಪಿಸಿದೆ.
ಚೀನಾ ಸೇನೆಯ ಗಂಭೀರ ಪ್ರಚೋದನೆಯ ಹೊರತಾಗಿಯೂ ಭಾರತೀಯ ಪಡೆಗಳು ಸಂಯಮ ಮತ್ತು ಪ್ರಬುದ್ಧತೆಯಿಂದ ವರ್ತಿಸಿವೆ. ಶಾಂತಿ, ಸಂಯಮ ಕಾಪಾಡಲು ನಾವು ಬದ್ಧರಾಗಿದ್ದೇವೆ. ಹಾಗೆಯೇ ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಲು ಯಾವುದೇ ಕ್ರಮ ಕೈಗೊಳ್ಳಲೂ ಸಿದ್ಧರಿದ್ದೇವೆ ಎಂದು ಸೇನೆ ಹೇಳಿದೆ