ತೆಲುಗು ಖ್ಯಾತ ಖಳನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ವಿಧಿವಶ

ಹೈದರಾಬಾದ್: ತೆಲುಗು ಖ್ಯಾತ ಖಳ‌ನಟ‌ ಜಯಪ್ರಕಾಶ ರೆಡ್ಡಿ (74)‌ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಹೃದಯಾಘಾತದಿಂದಾಗಿ ಶೌಚಾಲಯದಲ್ಲಿಯೇ ಜಯಪ್ರಕಾಶ್ ರೆಡ್ಡಿಯವರು ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆಂದು ಹೇಳಲಾಗುತ್ತಿದೆ. 

ಜಯಪ್ರಕಾಶ ರೆಡ್ಡಿ ಯವರು (74) ಗುಂಟೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅಸುನೀಗಿದ್ದು, ನಟನ ಅಗಲಿಕೆಗೆ ಟಾಲಿವುಡ್​ ಸೇರಿದಂತೆ ಇತರೆ ಭಾಷೆಯ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಬ್ರಹ್ಮಪುತ್ರುಡು ಚಿತ್ರದ ಮೂಲಕ ಟಾಲಿವುಡ್​ಗೆ ಪರಿಚಯವಾದ ಜಯಪ್ರಕಾಶ್​ ಅವರು ವೆಂಕಟೇಶ್​ ಅಭಿನಯದ ಪ್ರೇಮಿಂಚುಕುಂದಾಂ ರಾ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಭಗವಾನ್​, ಬಾವಗಾರು ಬಾಗುನ್ನಾರಾ, ಸಮರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ವಿಲನ್​ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.

ಸಮರ ಸಿಂಹ ರೆಡ್ಡಿ ಸಿನಿಮಾದಲ್ಲಿನ ಅಭಿನಯಕ್ಕೆ ಜಯಪ್ರಕಾಶ್​ ಅವರಿಗೆ ನಂದಿ ಪ್ರಶಸ್ತಿ ಸಹ ಸಿಕ್ಕಿತ್ತು. ರಾಯಲಸೀಮ ಸ್ಟೈಲ್​ನಲ್ಲಿ ಡೈಲಾಗ್​ ಹೊಡೆಯುತ್ತಲೇ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡವರು ಈ ನಟ. ಖಳನಟನ ಪಾತ್ರಗಳ ಜೊತೆಗೆ ಕಾಮಿಡಿ ರೋಲ್​ಗಳಲ್ಲೂ ರಂಜಿಸುತ್ತಿದ್ದ ಜಯಪ್ರಕಾಶ್​ ರೆಡ್ಡಿ ಕಡೆಯದಾಗಿ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾಗೆ ಬರುವ ಮೊದಲು ಜಯಪ್ರಕಾಶ್​ ರೆಡ್ಡಿ ಪೊಲೀಸ್​ ಇಲಾಖೆಯಲ್ಲಿ ಎಸ್​ಐ ಆಗಿದ್ದರು. ನಂತರ ಖ್ಯಾತ ನಿರ್ದೇಶಕ ದಾಸರಿ ನಾರಾಯಣರಾವ್​ ಅವರು ಇವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು.

Leave a Reply

Your email address will not be published. Required fields are marked *

error: Content is protected !!