ಫೆ.3ರಿಂದ ಮುಂಬೈ- ಸುರತ್ಕಲ್ ನಡುವೆ ವಿಶೇಷ ಸಾಪ್ತಾಹಿಕ ರೈಲು

ಉಡುಪಿ ಜ.29(ಉಡುಪಿ ಟೈಮ್ಸ್ ವರದಿ): ಪ್ರಯಾಣಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಫೆ.3ರಿಂದ ಸೆಂಟ್ರಲ್ ರೈಲ್ವೆಯ ಸಹಯೋಗದೊಂದಿಗೆ ಮುಂಬಯಿಯ ಲೋಕಮಾನ್ಯ ತಿಲಕ್ ಹಾಗೂ ಸುರತ್ಕಲ್ ನಡುವೆ ವಿಶೇಷ ಸಾಪ್ತಾಹಿಕ ರೈಲನ್ನು ಓಡಿಸಲು ಕೊಂಕಣ ರೈಲ್ವೆಯು ನಿರ್ಧರಿಸಿದೆ.

ಈ ಬಗ್ಗೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಅದರಂತೆ ರೈಲು ನಂ.01453 ಲೋಕಮಾನ್ಯ ತಿಲಕ್(ಟಿ)-ಸುರತ್ಕಲ್ ನಡುವಿನ ವಿಶೇಷ ಸಾಪ್ತಾಹಿಕ ರೈಲು ಫೆ.3ರಿಂದ ಮಾ.31ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ಅಪರಾಹ್ನ 3:30ಕ್ಕೆ ಸುರತ್ಕಲ್ ನಿಲ್ದಾಣ ತಲುಪಲಿದೆ.

ಅದೇ ರೀತಿ ರೈಲು ನಂ.01454 ಸುರತ್ಕಲ್- ಲೋಕಮಾನ್ಯ ತಿಲಕ್ ವಿಶೇಷ ಸಾಪ್ತಾಹಿಕ ರೈಲು ಫೆ.4ರಿಂದ ಎ.1ರವರೆಗೆ ಪ್ರತಿ ಶನಿವಾರ ಸಂಜೆ 7:40ಕ್ಕೆ ಸುರತ್ಕಲ್ ನಿಲ್ದಾಣದಿಂದ ಪ್ರಯಾಣ ಬೆಳೆಸೆ ಮರುದಿನ ಅಪರಾಹ್ನ 2:25ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣ ಮುಟ್ಟಲಿದೆ. ಈ ರೈಲಿಗೆ ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಫ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ ಹಾಗೂ ಮೂಲ್ಕಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗೂ ರೈಲು ಒಂದು ಟೂ ಟಯರ್ ಎಸಿ, ಮೂರು ಟ್ರಿ ಟಯರ್ ಎಸಿ, 8 ಸ್ಲೀಪರ್ ಕೋಚ್ ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತದೆ ಮಾತ್ರವಲ್ಲದೆ  ಕೊಂಕಣ ರೈಲು ಮಾರ್ಗದಲ್ಲಿ ಇನ್ನಷ್ಟು ವಿದ್ಯುತ್ ಚಾಲಿತ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ಕ್ರಮಗಳನ್ನು ಕೈಗೊಂಡಿದೆ.

ವಾರದಲ್ಲಿ ಎರಡು ದಿನ ಸಂಚರಿಸುವ ಎರ್ನಾಕುಳಂ ಜಂಕ್ಷನ್- ಓಖಾ, ತಿರುವನಂತಪುರಂ ಸೆಂಟ್ರಲ್- ವಿರಾವಲ್ ಸಾಪ್ತಾಹಿಕ ಎಕ್ಸ್‌ಪ್ರೆಸ್, ನಾಗರ ಕೊಯಿಲ್-ಗಾಂಧಿಧಾಮ ಸಾಪ್ತಾಹಿಕ ಎಕ್ಸ್‌ಪ್ರೆಸ್ ಹಾಗೂ ಎರ್ನಾಕುಳಂ ಜಂಕ್ಷನ್- ಎಚ್.ನಿಝಾಮುದ್ದೀನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಈಗಾಗಲೇ ಎಲೆಕ್ಟ್ರಿಕಲ್ ಇಂಜಿನ್‌ನಲ್ಲಿ ತನ್ನ ಸಂಚಾರವನ್ನು ಪ್ರಾರಂಭಿಸಿವೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!