ತೆಲುಗು ಖ್ಯಾತ ಖಳನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ವಿಧಿವಶ
ಹೈದರಾಬಾದ್: ತೆಲುಗು ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ (74) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಹೃದಯಾಘಾತದಿಂದಾಗಿ ಶೌಚಾಲಯದಲ್ಲಿಯೇ ಜಯಪ್ರಕಾಶ್ ರೆಡ್ಡಿಯವರು ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆಂದು ಹೇಳಲಾಗುತ್ತಿದೆ.
ಜಯಪ್ರಕಾಶ ರೆಡ್ಡಿ ಯವರು (74) ಗುಂಟೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅಸುನೀಗಿದ್ದು, ನಟನ ಅಗಲಿಕೆಗೆ ಟಾಲಿವುಡ್ ಸೇರಿದಂತೆ ಇತರೆ ಭಾಷೆಯ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಬ್ರಹ್ಮಪುತ್ರುಡು ಚಿತ್ರದ ಮೂಲಕ ಟಾಲಿವುಡ್ಗೆ ಪರಿಚಯವಾದ ಜಯಪ್ರಕಾಶ್ ಅವರು ವೆಂಕಟೇಶ್ ಅಭಿನಯದ ಪ್ರೇಮಿಂಚುಕುಂದಾಂ ರಾ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಭಗವಾನ್, ಬಾವಗಾರು ಬಾಗುನ್ನಾರಾ, ಸಮರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಸಮರ ಸಿಂಹ ರೆಡ್ಡಿ ಸಿನಿಮಾದಲ್ಲಿನ ಅಭಿನಯಕ್ಕೆ ಜಯಪ್ರಕಾಶ್ ಅವರಿಗೆ ನಂದಿ ಪ್ರಶಸ್ತಿ ಸಹ ಸಿಕ್ಕಿತ್ತು. ರಾಯಲಸೀಮ ಸ್ಟೈಲ್ನಲ್ಲಿ ಡೈಲಾಗ್ ಹೊಡೆಯುತ್ತಲೇ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡವರು ಈ ನಟ. ಖಳನಟನ ಪಾತ್ರಗಳ ಜೊತೆಗೆ ಕಾಮಿಡಿ ರೋಲ್ಗಳಲ್ಲೂ ರಂಜಿಸುತ್ತಿದ್ದ ಜಯಪ್ರಕಾಶ್ ರೆಡ್ಡಿ ಕಡೆಯದಾಗಿ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಸಿನಿಮಾಗೆ ಬರುವ ಮೊದಲು ಜಯಪ್ರಕಾಶ್ ರೆಡ್ಡಿ ಪೊಲೀಸ್ ಇಲಾಖೆಯಲ್ಲಿ ಎಸ್ಐ ಆಗಿದ್ದರು. ನಂತರ ಖ್ಯಾತ ನಿರ್ದೇಶಕ ದಾಸರಿ ನಾರಾಯಣರಾವ್ ಅವರು ಇವರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು.