ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕಳಪೆ ಆಹಾರ ಬಗ್ಗೆ ಪ್ರಶ್ನಿಸುವುದು ಮಹಾಪರಾಧವೇ?- ಬಿಕೆ ಹರಿಪ್ರಸಾದ್
ಬೆಂಗಳೂರು, ಜ. 27: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅನ್ನ ಕೇಳುವುದು ಅಪರಾಧ, ಕಳಪೆ ಆಹಾರವನ್ನ ಪ್ರಶ್ನಿಸುವುದು ಮಹಾಪರಾಧವೇ?” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸರಣಿ ಟ್ವಿಟ್ ಮಾಡಿರುವ ಅವರು, ‘ಅನ್ನ, ಹಸಿವಿನಲ್ಲಿ ರೀತಿ ರಿವಾಜಿನ ಜೊತೆ, ಚಿತಾವಣಿಯನ್ನೂ ಹುಡುಕಬೇಡಿ ಬಳ್ಳಾರಿ ಜಿಲ್ಲಾಧಿಕಾರಿಗಳೇ. ಹಸಿವಿನ ಬೆಲೆ ಹಸಿದವನಿಗೆ ಮಾತ್ರ ಗೊತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೂಡಲೇ ಮಧ್ಯಪ್ರವೇಶಿಸಿ ಬಳ್ಳಾರಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ’ ಎಂದು ಆಗ್ರಹಿಸಿದ್ದಾರೆ.
‘ಸರಕಾರಿ ಕಾಲೇಜುಗಳಿಗೆ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿವೆ, ಉನ್ನತ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನವೂ ನೀಡದೆ ಬಿಜೆಪಿ ಸರಕಾರ ಬಡವರ ಮಕ್ಕಳ ಶಿಕ್ಷಣ ಕಸಿದುಕೊಂಡಿದೆ. ಕಾಲೇಜುಗಳನ್ನ ಸ್ಥಾಪಿಸದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಿದ್ದು ಯಾಕೆ? ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಇದ್ಯಾ ಬಸವರಾಜ ಬೊಮ್ಮಾಯಿ ಅವರೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.