ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರನ್ನು ಬಿಟ್ಟು ಹಾರಿದ್ದ ಗೋ ಫಸ್ಟ್ ಗೆ 10 ಲಕ್ಷ ದಂಡ!
ನವದೆಹಲಿ: ಕಳೆದ ಜನವರಿ 9 ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ 55 ಪ್ರಯಾಣಿಕರನ್ನು ಬಿಟ್ಟು ದೆಹಲಿಗೆ ಹಾರಿದ್ದ ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಶುಕ್ರವಾರ 10 ಲಕ್ಷ ರೂ. ದಂಡ ವಿಧಿಸಿದೆ.
ಘಟನೆಯ ನಂತರ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಗೆ ಗೋ ಫಸ್ಟ್ ನೀಡಿದ ಉತ್ತರದಲ್ಲಿ, ವಿಮಾನದಲ್ಲಿ ಪ್ರಯಾಣಿಕರನ್ನು ಬೋರ್ಡಿಂಗ್ ಮಾಡುವ ಬಗ್ಗೆ ಟರ್ಮಿನಲ್ ಸಂಯೋಜಕರು, ವಾಣಿಜ್ಯ ಸಿಬ್ಬಂದಿ ಮತ್ತು ಸಿಬ್ಬಂದಿ ನಡುವೆ ಸಂವಹನ ಕೊರತೆಯಿಂದ ಈ ಘಟನೆ ನಡೆದಿದೆ ಎಂದು ತಿಳಿಸಿದೆ.
“ಗ್ರೌಂಡ್ ಹ್ಯಾಂಡ್ಲಿಂಗ್, ಲೋಡ್ ಮತ್ತು ಟ್ರಿಮ್ ಶೀಟ್ ತಯಾರಿಕೆ, ವಿಮಾನ ರವಾನೆ ಮತ್ತು ಪ್ರಯಾಣಿಕರ ನಿರ್ವಹಣೆಗೆ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳುವಲ್ಲಿ ವಿಮಾನಯಾನ ಸಂಸ್ಥೆ ವಿಫಲವಾಗಿದೆ” ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ. ಈ ಲೋಪಗಳಿಗಾಗಿ, ಡಿಜಿಸಿಎ, ಗೋ ಫಸ್ಟ್ ಏರ್ಲೈನ್ಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.