ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಶಸ್ತ್ರ ಪಡೆಗಳು ಪುರಾವೆ ತೋರಿಸಬೇಕಾಗಿಲ್ಲ- ರಾಹುಲ್ ಗಾಂಧಿ
ಜಮ್ಮು: ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ನಾನು ಮತ್ತು ಪಕ್ಷ ಒಪ್ಪುವುದಿಲ್ಲ ಎಂದಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಸಶಸ್ತ್ರ ಪಡೆಗಳು ಯಾವುದೇ ಪುರಾವೆ ನೀಡುವ ಅಗತ್ಯವಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಾಗಿ ಹೇಳಿಕೊಂಡಿದ್ದರೂ, ಅದಕ್ಕೆ ಯಾವುದೇ ಪುರಾವೆಗಳಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ದಿಗ್ವಿಜಯ ಸಿಂಗ್ ಆರೋಪಿಸಿದ್ದರು.
“ದಿಗ್ವಿಜಯ ಸಿಂಗ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನಾವು ಅದನ್ನು ಒಪ್ಪುವುದಿಲ್ಲ ಎಂಬುದು ಕಾಂಗ್ರೆಸ್ನ ಅಧಿಕೃತ ನಿಲುವು” ಎಂದು ರಾಹುಲ್ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ. “ಅವರು(ಸಶಸ್ತ್ರ ಪಡೆಗಳು) ಯಾವುದೇ ಪುರಾವೆಗಳನ್ನು ಒದಗಿಸಬೇಕಾಗಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.