ಫೆ.16 ತ್ರಿಪುರಾ, ಫೆ.27 ನಾಗಾಲ್ಯಾಂಡ್- ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ

ನವದೆಹಲಿ: ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಫೆಬ್ರುವರಿ 16ರಂದು ತ್ರಿಪುರಾ, ಫೆಬ್ರುವರಿ 27ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಮಾರ್ಚ್ 2 ರಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22ರಂದು ಕೊನೆಗೊಳ್ಳಲಿದೆ. ಪ್ರತಿ ರಾಜ್ಯದಲ್ಲಿ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು 62.8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಚುನಾವಣಾ ಆಯೋಗದ ತಂಡವು ರಾಜ್ಯಗಳಿಗೆ ಭೇಟಿ ನೀಡಿತ್ತು ಮತ್ತು ಭದ್ರತಾ ವ್ಯವಸ್ಥೆಗಳ ಪರಿಶೀಲನೆಯ ಜೊತೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿತು. ಇದರೊಂದಿಗೆ, ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ, ಪೊಲೀಸ್ ಮುಖ್ಯಸ್ಥರೊಂದಿಗೆ ಭದ್ರತಾ ವ್ಯವಸ್ಥೆಗಳ ಕುರಿತು ಪ್ರತ್ಯೇಕ ಸಭೆ ನಡೆಸಿದರು. ಅಲ್ಲದೆ, ಚುನಾವಣಾ ಸಮಿತಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದೆ.

ಸದ್ಯ ತ್ರಿಪುರಾದಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರವಿದ್ದು, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲ್ ಡೆಮಾಕ್ರಟಿಕ್ ಪ್ರೊಗ್ರೆಸ್ಸೀವ್ ಪಾರ್ಟಿ (ಎನ್‌ಡಿಪಿಪಿ) ಆಡಳಿತದಲ್ಲಿದೆ. ಮೇಘಾಲಯದಲ್ಲಿ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧಿಕಾರದಲ್ಲಿದೆ.

ನಾಲ್ಕು ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ 2023 ರಲ್ಲಿ ಚುನಾವಣೆಗೆಗಳು ನಡೆಯಲಿವೆ.

Leave a Reply

Your email address will not be published. Required fields are marked *

error: Content is protected !!