ಸೌಹಾರ್ದ ಬ್ಯಾಂಕ್’ಗಳ ಹಗರಣ ಸಿಬಿಐಗೆ- ಸಚಿವ ಎಸ್‌.ಟಿ. ಸೋಮಶೇಖರ್‌

ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದರು

ಎರಡೂ ಸಹಕಾರಿ ಬ್ಯಾಂಕ್‌ಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆ, ಸಾಲ ವಸೂಲಾತಿ, ಪುನಶ್ಚೇತನ ಕುರಿತು ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಸದಸ್ಯರ ಜತೆ ಮಂಗಳವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಈ ಎರಡೂ ಸಹಕಾರಿ ಬ್ಯಾಂಕ್‌ಗಳಲ್ಲಿನ ಅಕ್ರಮದ ಕುರಿತು ತನಿಖೆ ಆರಂಭವಾಗಿ ಮೂರು ವರ್ಷಗಳಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಈ ಕಾರಣದಿಂದ ತನಿಖೆಯನ್ನು ಸಿಬಿಐಗೆ ವಹಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ಠೇವಣಿದಾರರ ಹಿತ ಕಾಪಾಡುವುದು ಸರ್ಕಾರದ ಆದ್ಯತೆ. ಸಾಲ ವಸೂಲಾತಿ ಸಮರ್ಪಕ ನಡೆಯದೇ ಇರುವುದರಿಂದ ಠೇವಣಿದಾರರಿಗೆ ಹಣ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರು ಸರ್ಕಾರವನ್ನು ದೂರುವಂತಾಗಿದೆ. ಈ ಎರಡೂ ಬ್ಯಾಂಕ್‌ಗಳು ಸೇರಿದಂತೆ ಇತರೆ ಯಾವುದೇ ಸಹಕಾರಿ ಸಂಸ್ಥೆಗಳಲ್ಲಿ ಈ ರೀತಿಯ ಅಕ್ರಮ ನಡೆದಿದ್ದರೂ, ಸಿಬಿಐ ತನಿಖೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದರು.

ಈ ಎರಡೂ ಬ್ಯಾಂಕ್‌ಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಹಾಗೂ ಸಾಲ ವಸೂಲಾತಿಯಲ್ಲಿನ ಪ್ರಗತಿ ಕುರಿತು ಅಧಿಕಾರಿಗಳು ಸಭೆಗೆ ವಿವರ ನೀಡಿದರು. ‘ಸಿಬಿಐ ತನಿಖೆಗೆ ವಹಿಸಿದರೆ ಏನು ಸಮಸ್ಯೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಈ ಸಂಬಂಧ ಸಂಪುಟ ಸಭೆಗೆ ಮಂಡಿಸಲು ಟಿಪ್ಪಣಿ ಸಿದ್ಧಪಡಿಸುವಂತೆ ಸೂಚಿಸಿದರು

ಹಗರಣದ ತನಿಖೆ ಆರಂಭವಾಗಿ ಮೂರು ವರ್ಷವಾದರೂ ಸಾಲ ವಸೂಲಾತಿ ಆಗುತ್ತಿಲ್ಲ. ಸಭೆಗಳು ಮಾತ್ರ ನಡೆಯುತ್ತಿವೆಯೇ ಹೊರತು ಯಾವುದೇ ಫಲಿತಾಂಶ ಬರುತ್ತಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸಮಸ್ಯೆ ಏನು ಎಂದು ಗುರುರಾಘವೇಂದ್ರ ಬ್ಯಾಂಕ್ ನ ಆಡಳಿತಾಧಿಕಾರಿಯನ್ನು ಪ್ರಶ್ನಿಸಿದರು.

ಸರ್ಕಾರದ ಮೇಲೆ ಠೇವಣಿದಾರರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಠೇವಣಿದಾರರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಪ್ರಕರಣವನ್ನು ಸಿಬಿಐಗೆ ವಹಿಸಲಾಗುವುದು. ಸಂಪುಟದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!