ಟಗರು ಗುಮ್ಮುತ್ತೆ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ?: ಸಿದ್ದರಾಮಯ್ಯ
ಬೆಂಗಳೂರು: ಟಿವಿ ಚಾನೆಲ್ನವರು ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ.
ಟಗರು ಗುಮ್ಮುತ್ತೆ ಅಂತ ಹೇಳುತ್ತಾರೆ. ಆದರೆ ನಾನು ಯಾರಿಗೆ ಗುಮ್ಮಿದ್ದೇನೆ?, ಅವರು ನನಗೆ ಅವಮಾನ ಮಾಡಿದ್ದಾರೆ ಎಂದು ನಾನೂ ಕೋಪಮಾಡಿಕೊಳ್ಳಬಹುದಲ್ಲಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದನ್ನು ಅವಮಾನಿಸುವ ಉದ್ದೇಶ ನನ್ನದಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಅವರು ಪ್ರಧಾನಿ ಮೋದಿ ಮುಂದೆ ಮಾತನಾಡುವ ಧೈರ್ಯವಿಲ್ಲದ ಹೇಡಿ ಎಂದು ನಾನು ಹೇಳಿದ್ದೇನೆ.
ನಾಯಿ ತನ್ನ ನಿಷ್ಠೆಗೆ ಹೆಸರುವಾಸಿಯಾಗಿದ್ದರೆ, ನಾಯಿಮರಿ ಹೇಡಿತನಕ್ಕೆ ಹೆಸರುವಾಸಿಯಾಗಿದೆ. ಮೋದಿಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದನ್ನು ಪ್ರಶ್ನಿಸಿದ ಬೊಮ್ಮಾಯಿ ಅವರನ್ನು ಹುಲಿ ಅಥವಾ ಸಿಂಹ ಎಂದು ಕರೆಯಬೇಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್ಟಿ ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಸಿಎಂ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವೆ? ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ5,495 ಕೋಟಿ ವಿಶೇಷ ಅನುದಾನವನ್ನು ನೀಡಲು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದರು. ಬೊಮ್ಮಾಯಿ ಅವರು ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಅವರಿಗೆ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.