ನಾಯಿ ಬಹಳ ನಿಯತ್ತಿನ ಪ್ರಾಣಿ, ಪ್ರಧಾನಿ ಮೋದಿ ಕಾಮಧೇನುವಿನಂತೆ: ಸಿಎಂ ಬೊಮ್ಮಾಯಿ
ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಸಿಎಂ ಬಸವರಾಜ ಬೊಮ್ಮಾಯಿಯವರು ನಾಯಿಮರಿ ಥರ ಮುದುಡಿಕೊಂಡಿರುತ್ತಾರೆ, ಅವರನ್ನು ಕಂಡರೆ ಭಯಪಡುತ್ತಾರೆ, ರಾಜ್ಯಕ್ಕೆ ಬೇಕಾದ ಅನುದಾನ ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯನವರ ಮಾತುಗಳು ಅವರ ಅವಿವೇಕತನ, ಅವರ ಸಂಸ್ಕೃತಿ, ನಡವಳಿಕೆ, ವ್ಯಕ್ತಿತ್ವವನ್ನು ತೋರಿಸುತ್ತವೆ. ಪ್ರತಿಯಾಗಿ ನಾನು ಏನೂ ಹೇಳುವುದಿಲ್ಲ. ನಾಯಿ ಬಹಳ ನಿಯತ್ತಿನ ಪ್ರಾಣಿ, ಜನರಿಗೆ ಬಹಳ ನಿಯತ್ತಿನಿಂದ ಕೆಲಸ ಮಾಡುವ ವ್ಯಕ್ತಿ ನಾನು. ನಾಯಿಯಲ್ಲಿರುವ ನಿಯತ್ತನ್ನು ನನ್ನ ಜೀವನದಲ್ಲಿಯೂ ಅಳವಡಿಸಿ ಕೊಂಡು ಹೋಗುತ್ತೇನೆ.
ಜನರಿಗೆ ಸುಳ್ಳು ಹೇಳುವುದು, ವಂಚನೆ ಮಾಡುವುದು, ಸುಳ್ಳು ಸೌಭಾಗ್ಯಗಳ ಭರವಸೆ ನೀಡುವುದು ಸಿದ್ದರಾಮಯ್ಯ ನವರು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳು. ಬಿಜೆಪಿ ಜನರಿಗೆ ಏನು ಮಾಡಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ, ಇದೆಲ್ಲದಕ್ಕೂ ರಾಜ್ಯದ ಜನತೆ ಉತ್ತರಿಸುತ್ತಾರೆ, ಪ್ರಧಾನಿ ಮೋದಿಯವರು ಕಾಮಧೇನುವಿನಂತೆ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದರು, ಇದೀಗ ವಿಪಕ್ಷ ಪಕ್ಷ ನಾಯಕ ಆಗಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿದ್ದು, ಸಿಎಂ ಸ್ಥಾನದ ವ್ಯಕ್ತಿಯನ್ನು ನಾಯಿ ಹೋಲಿಕೆ ಮಾಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಿಎಂಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಲಘುವಾಗಿ ಮಾತಾಡೋದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದರು.
ಸೋನಿಯಾ ಗಾಂಧಿ ಮನೆಯಲ್ಲಿ ಇಲಿ, ಬೆಕ್ಕು ಜಿರಳೆ ಸಿದ್ದರಾಮಯ್ಯ ಇರುತ್ತಾರೆ ಎಂದು ನಾವು ಹೇಳಬಹುದು. ಆದರೆ ನಾವು ಆ ರೀತಿ ಹೇಳುವುದಿಲ್ಲ. ಅದು ನಮ್ಮ ಸಂಸ್ಕೃತಿಯಲ್ಲ. ಸಿಎಂ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಸಿಎಂ ಸ್ಥಾನಕ್ಕೆ ಅಗೌರವ ತೋರಿದ ಸಿದ್ದರಾಮಯ್ಯ ಅವರು ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಹೇಳಿಕೆ ಬಿಜೆಪಿಯಿಂದ ತೀವ್ರವಾಗಿ ಖಂಡನೆಗೆ ಆಗ್ರಹ ಮಾಡುತ್ತೇನೆ. ಸೋನಿಯಾ ಮುಂದೆ ಸಿದ್ದರಾಮಯ್ಯ ತುಟಿ ಬಿಚ್ಚಲ್ಲ. ನಮ್ಮ ಸಿಎಂ ಪ್ರಧಾನಿ ಮುಂದೆ ಎಲ್ಲವೂ ಮಾತನಾಡುತ್ತಾರೆ ಎಂದರು.