ಪತ್ನಿಯ ಒಪ್ಪಿಗೆಯಿಲ್ಲದೆ ಪತಿ ಮನೆಯ ವಸ್ತುಗಳು, ಆಭರಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅನುಮತಿ ಇಲ್ಲ: ಹೈಕೋರ್ಟ್
ನವದೆಹಲಿ: ತನ್ನ ಪತ್ನಿಗೆ ಮಾಹಿತಿ ನೀಡದೆ ಮತ್ತು ಆಕೆಯ ಒಪ್ಪಿಗೆ ಅಥವಾ ಆಕೆಗೆ ಅರಿವಿಲ್ಲದೆ ಪತಿ ಆಭರಣ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಪತ್ನಿಯ ದೂರಿನ ಮೇರೆಗೆ ಪತಿಯ ಬಂಧನ ಪೂರ್ವ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ನಡೆಸಿದರು. ಮನೆಗೆ ಬೀಗ ಹಾಕಲಾಗಿದೆ ಮತ್ತು ತಾನು ಮನೆಯಲ್ಲಿ ಇಲ್ಲದಿರುವಾಗ ಆಭರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪತ್ನಿ ಆರೋಪಿಸಿದ್ದಾರೆ. ಯಾವುದೇ ಕಳವು ನಡೆದಿಲ್ಲ. ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ತನ್ನ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪತಿಯ ಪರ ವಕೀಲರು ವಾದಿಸಿದರು.
ಆದರೆ, ‘ಅರ್ಜಿದಾರರು ದೂರುದಾರರ ಪತಿಯಾಗಿದ್ದರೂ ಸಹ, ಆಕೆಗೆ ತಿಳಿಯದೆ ಪತಿ ಕೂಡ ಆಭರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಈ ರೀತಿ ತೆಗೆದುಕೊಳ್ಳಲು ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಇಬ್ಬರ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಕೂಡ, ಕಾನೂನನ್ನು ಕೈಗೆತ್ತಿಕೊಳ್ಳಲು ಯಾವುದೇ ವ್ಯಕ್ತಿಗೆ ಅನುಮತಿ ನೀಡಲಾಗುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
‘ಇಸ್ತ್ರಿಧಾನ್’ (ಆಕೆಯ ಆಸ್ತಿ) ಗೆ ಸಂಬಂಧಿಸಿದಂತೆ ಹೆಂಡತಿಯ ದೂರು ಬಾಕಿ ಉಳಿದಿರುವುದರಿಂದ, ಹೆಂಡತಿಯನ್ನು ಗುಟ್ಟಾಗಿ ಮನೆಯಿಂದಹೊರಹಾಕಲು ಮತ್ತು ಆಕೆಗೆ ತಿಳಿಯದೆಯೇ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪತಿಗೆ ಅವಕಾಶವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರಿಗೆ ಬಂಧನ ಪೂರ್ವ ಜಾಮೀನನ್ನು ತಿರಸ್ಕರಿಸಿದ ನ್ಯಾಯಾಲಯ, ನಿರೀಕ್ಷಣಾ ಜಾಮೀನಿನ ಸೆಕ್ಷನ್ 438ರ ಅಡಿಯಲ್ಲಿ ಈ ಅಧಿಕಾರವನ್ನು ಸಾಮಾನ್ಯ ರೀತಿಯಲ್ಲಿ ಚಲಾಯಿಸಬಾರದು ಎನ್ನಲಾಗಿದೆ. ಅರ್ಜಿದಾರರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅವರನ್ನು ಗಾಯಗೊಳಿಸುವ ಅಥವಾ ಅವಮಾನಿಸುವ ಉದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ತಿಳಿದುಬಂದರೆ ಮಾತ್ರ ಈ ಅಧಿಕಾರವನ್ನು ಚಲಾಯಿಸಬೇಕು ಎಂದು ಅಭಿಪ್ರಾಯಪಟ್ಟಿತು.
ಅಂತೆಯೇ, ಬಂಧನದ ನಿರೀಕ್ಷೆಯಲ್ಲಿ ಜಾಮೀನಿನ ಆದೇಶವನ್ನು ಗುರಾಣಿಯಾಗಿ ಬಳಸಲು ಅನುಮತಿಯಿಲ್ಲ. ವಿಚಾರಣೆಗೆ ಒಳಪಡದೆಯೇ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಹೀಗಾಗಿ, ಆರೋಪಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಈ ಹಂತದಲ್ಲಿ ಹೇಳಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ