ವಲಸೆ ಕಾರ್ಮಿಕರಿಗೆ ಕೆಲಸದ ಸ್ಥಳದಿಂದಲೇ ಮತದಾನಕ್ಕೆ ರಿಮೋಟ್ ಮತಯಂತ್ರ

ನವದೆಹಲಿ, ಡಿ.29 : ಮುಂಬರುವ ಚುನಾವಣೆಯಲ್ಲಿ ವಲಸೆ ಕಾರ್ಮಿಕರಿಗೆ ಕೆಲಸದ ಸ್ಥಳದಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸು ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗವು ಮತದಾನ ಪ್ರಕ್ರಿಯಲ್ಲಿ ರಿಮೋಟ್ ಎಲೆಕ್ಟ್ರಾನಿಕ್ ಮತಯಂತ್ರವನ್ನು ಪರಿಚಯಿಸಲು ಸಿದ್ದತೆ ನಡೆಸುತ್ತದೆ.

ಒಂದೇ ರಿಮೋಟ್ ಮತಗಟ್ಟೆಯಿಂದ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ನಿಭಾಯಿಸುವ ಸಾಮಥ್ರ್ಯವನ್ನು ಈ ಮತಯಂತ್ರ ಹೊಂದಲಿದ್ದು, ಇದನ್ನು ಅಭಿವೃದ್ದಿಪಡಿಸಿ ಬಳಕೆ ಮಾಡುವುದರಿಂದ ವಲಸೆ ಮತದಾರರು ಮತ ಚಲಾವಣೆಗಾಗಿಯೇ ಊರಿಗೆ ಹೋಗುವ ಅನಿವಾರ್ಯತೆ ತಪ್ಪಲಿದೆ. ಅಲ್ಲದೆ ತಮ್ಮ ಕಾರ್ಯಕ್ಷೇತ್ರದ ಮತಗಟ್ಟೆಯಿಂದಲೇ ತಮ್ಮಿಷ್ಟದ ಅಭ್ಯರ್ಥಿಗೆ ಮತ ಹಾಕಬಹುದಾಗಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ 30 ಕೋಟಿಗೂ ಮಿಕ್ಕಿ ಮತದಾರರು ಮತದಾನ ಮಾಡಿರಲಿಲ್ಲ. ಇದರಿಂದ ದೇಶದಲ್ಲಿ ಒಟ್ಟಾರೆ 67.4ರಷ್ಟು ಮತದಾನವಾಗಿತ್ತು. ಆಂತರಿಕ ವಲಸೆಯೂ ಇದಕ್ಕೆ ಕಾರಣ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ವಲಸೆ ಕಾರ್ಮಿಕರಿಗೆ ಮತದಾನಕ್ಕೆ ಕಾರ್ಯಸ್ಥಾನದಿಂದಲೇ ಅವಕಾಶ ಕಲ್ಪಿಸಿ ಮತದಾನ ಸುಧಾರಿಸುವ ದೃಷ್ಟಿಯಿಂದ ಈ ಹೊಸ ವ್ಯವಸ್ಥೆಯನ್ನು ಚುನಾವಣಾ ಆಯೋಗ ಅಭಿವೃದ್ದಿಪಡಿಸುತ್ತಿದೆ.

ಇನ್ನು ಚುನಾವಣಾ ಆಯೋಗವು ಇದನ್ನು ಪರಿಚಯಿಸುವುದಕ್ಕೂ ಮುನ್ನ ರಾಜಕೀಯ ಪಕ್ಷಗಳಿಂದ ಅಭಿಪ್ರಾಯವನ್ನು ಆಹ್ವಾನಿಸಿದ್ದು, ಕಾನೂನು, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ರಾಜಕೀಯ ಪಕ್ಷಗಳ ಅಭಿಪ್ರಾಯ ಆಲಿಸಿ ಮುಂದಿನ ಹೆಜ್ಜೆ ಇಡಲು ನಿರ್ಧರಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

Leave a Reply

Your email address will not be published. Required fields are marked *

error: Content is protected !!