ಕೋವಿಡ್-19 ಜನವರಿಯಲ್ಲಿ ದೇಶದಲ್ಲಿ ಕೊರೊನಾ ಹೆಚ್ಚಳ ಸಾಧ್ಯತೆ: ಕೇಂದ್ರ ಸರ್ಕಾರ
ನವದೆಹಲಿ: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಉಲ್ಬಣಿಸಿರುವ ಕೊರೊನಾ ಸೋಂಕು ಇದೀಗ ಭಾರತದಲ್ಲೂ ಹೊಸ ಆಲೆಯ ಭೀತಿ ಸೃಷ್ಟಿ ಮಾಡಿದ್ದು, ಮುಂದಿನ 40 ದಿನಗಳು ದೇಶಕ್ಕೆ ಅತ್ಯಂತ ನಿರ್ಣಾಯಕವಾಗಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಕೇಂದ್ರ ಆರೋಗ್ಯ ಇಲಾಖೆಯ ಕೋವಿಡ್ ತಜ್ಞರ ಸಲಹಾ ಸಮಿತಿಯಲ್ಲಿ ನಡೆದ ಸಭೆಯ ಬಳಿಕ ಈ ಮಾಹಿತಿ ಹೊರಬಿದ್ದಿದ್ದು, ಮುಂದಿನ ತಿಂಗಳು ದೇಶದಲ್ಲಿ ಸೋಂಕು ಉತ್ತುಂಗಕ್ಕೇರಲಿದ್ದು ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮುನ್ನೆಚ್ವರಿಕೆ ನೀಡಿದೆ. ‘ಜನವರಿಯಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣ ಹೆಚ್ಚಾಗಲಿದ್ದು ಮುಂದಿನ 40 ದಿನಗಳು ನಿರ್ಣಾಯಕ. ದೇಶದಲ್ಲಿ ಸೋಂಕು ಉತ್ತುಂಗಕ್ಕೇರಿದರೂ ಜೊತೆಗೆ ಅಲೆ ಎದ್ದರೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ತೀರಾ ಕಡಿಮೆ ಇರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈ “ಹಿಂದೆ, ಕೋವಿಡ್ -19 ರ ಹೊಸ ಅಲೆಯು ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30-35 ದಿನಗಳ ನಂತರ ಭಾರತ ಪ್ರವೇಶಿಸಲಿದೆ. ಅದನ್ನು ಆದರಿಸಿ ತಜ್ಞರು ಈ ಎಚ್ಚರಿಕೆ ನೀಡಿದ್ದಾರೆ. ನಿರ್ಲಕ್ಷ್ಯ ವಹಿಸದೆ ಕೋವಿಡ್ ಮುನ್ನೆಚ್ಚರಿಕೆ ನಿರ್ವಹಿಸಿದರೆ ಪರಿಣಾಮಕಾರಿಯಾಗಿ ಪರಿಸ್ಥಿತಿ ಎದುರಿಸಬಹುದು. ಕೋವಿಡ್ ಉಪ ತಳಿ ಹೆಚ್ಚಳದಿಂದ ಸೋಂಕು ಹೆಚ್ಚಳ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸೋಂಕಿನ ತೀವ್ರತೆ ಕಡಿಮೆ
ಸೋಂಕಿನ ಅಲೆ ಹೆಚ್ಚಾದರೂ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ. ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಮತ್ತು ಯಾವುದೇ ಘಟನೆಗೆ ಸಿದ್ಧರಾಗುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ
ಕೋವಿಡ್ ಪ್ರಕರಣಗಳ ಹೊಸ ಉಲ್ಬಣ ಮತ್ತು ದೇಶದ ಸನ್ನದ್ಧತೆ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಹತ್ವದ ಸಭೆ ನಡೆಸಿದ್ದಾರೆ. ಪ್ರಕರಣಗಳಲ್ಲಿ ಇತ್ತೀಚಿನ ಅಲೆಯಲ್ಲಿ ಒಮಿಕ್ರಾನ್ ಉಪತಳಿ ಬಿಎಫ್ 7 ನಿಂದ ಸೋಂಕು ದೇಶದಲ್ಲಿ ಹೆಚ್ಚಾಗುತ್ತಿದೆ. ಅಧಿಕೃತ ಮೂಲಗಳು ಈ ಬಿಎಫ್ -7 ಉಪ ತಳಿ ಪ್ರಸರಣ ತೀವ್ರವಾಗಿ ಹೆಚ್ಚಾಗಿದೆ ಮತ್ತು ಸೋಂಕಿತ ವ್ಯಕ್ತಿ 16 ವ್ಯಕ್ತಿಗಳಿಗೆ ಮತ್ತಷ್ಟು ಸೋಂಕು ತಗುಲಿಸ ಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.