ಕೇರಳಕ್ಕೂ ಹರಡಿದ ಹಕ್ಕಿ ಜ್ವರ- ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ
ಕೊಟ್ಟಾಯಂ ಡಿ.27: ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ ವ್ಯಾಪಿಸಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಬಗ್ಗೆ ಕೊಟ್ಟಾಯಂ ಜಿಲ್ಲಾಡಳಿತ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪಕ್ಷಿ ಜ್ವರ ಹರಡಿರುವುದು ದೃಢಪಟ್ಟಿದ್ದು, ಈ ಜಿಲ್ಲೆಯ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 6,017 ಪಕ್ಷಿಗಳನ್ನು ನಾಶ ಪಡಿಸಲಾಗಿದೆ. ಈ ಪೈಕಿ ಬಾತುಕೋಳಿಗಳೇ ಹೆಚ್ಚಿವೆ. ಈ ನಾಶವು ವೆಚೂರ್, ನೀಂದೂರ್ ಮತ್ತು ಅರ್ಪೂಕರ ಪಂಚಾಯಿತಿ ವ್ಯಾಪ್ತಿಗಳಿಂದ ವರದಿಯಾಗಿದೆ ಎಂದು ತಿಳಿಸಿದೆ.
ವೆಚೂರ್ ಪಂಚಾಯಿತಿ ವ್ಯಾಪ್ತಿಯಲ್ಲಿ 133 ಬಾತುಕೋಳಿಗಳು ಮತ್ತು 156 ಕೋಳಿಗಳು, ನೀಂದೂರ್ ಪಂಚಾಯಿತಿ ವ್ಯಾಪ್ತಿಯಲ್ಲಿ 2,753 ಬಾತುಕೋಳಿಗಳು ಹಾಗೂ ಅರ್ಪೂಕರ ಪಂಚಾಯಿತಿ ವ್ಯಾಪ್ತಿಯಲ್ಲಿ 2,975 ಬಾತುಕೋಳಿಗಳನ್ನು ನಾಶಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ನಡುವೆ, ಕೇರಳದಲ್ಲಿ ಪಕ್ಷಿ ಜ್ವರ ಹರಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ರಾಜ್ಯದಿಂದ ಶೀತಲೀಕರಿಸಿದ ಕೋಳಿ ಮಾಂಸವನ್ನು ಆಮದು ಮಾಡಿಕೊಳ್ಳುವುದಕ್ಕೆ ಲಕ್ಷದ್ವೀಪ ಆಡಳಿತ ತಾತ್ಕಾಲಿಕ ನಿಷೇಧ ಹೇರಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಪಕ್ಷಿ ಜ್ವರ ಅಥವಾ ಏವಿಯನ್ ಇನ್ಫ್ಲುಯೆಂಝಾ ತೀವ್ರ ಸ್ವರೂಪದ ಸೋಂಕು ಹೊಂದಿರುವ ಪ್ರಾಣಿಜನ್ಯ ರೋಗವಾಗಿದ್ದು, ಏವಿಯನ್ ಇನ್ಫ್ಲುಯೆಂಝಾ ವೈರಸ್ ಸೋಂಕಿನಿಂದ ಈ ರೋಗ ಹರಡುತ್ತದೆ. ಏವಿಯನ್ ಇನ್ಫ್ಲುಯೆಂಝಾ (H5N1)ಅಥವಾ H5N8 ಹಲವಾರು ಪ್ರಭೇದದ ತಳಿಯೊಂದಿಗೆ ಲಭ್ಯವಿದ್ದರೂ, ಅದನ್ನು ಸಾಮಾನ್ಯವಾಗಿ ಪಕ್ಷಿ ಜ್ವರ ಎಂತಲೇ ಕರೆಯಲಾಗುತ್ತದೆ. ಈ ಸೋಂಕು ಪಕ್ಷಿಗಳ ವಿಸರ್ಜನೆ, ಸ್ರವಿಸುವಿಕೆ ಮತ್ತು ಎಂಜಲಿನ ಮೂಲಕ ಹರಡುತ್ತದೆ.