ರಾಜ್ಯದಲ್ಲಿ ದಾಖಲೆ ಮದ್ಯ ಮಾರಾಟ-ವಾರ್ಷಿಕ 30 ಸಾವಿರ ಕೋಟಿ ರೂ.ಆದಾಯ
ಬೆಂಗಳೂರು: ಅಬಕಾರಿ ಇಲಾಖೆ ಈವರೆಗೆ ₹19,244 ಕೋಟಿ ಆದಾಯ ಗಳಿಸಿದ್ದು, ಮಾರ್ಚ್ ವೇಳೆಗೆ ಆ ಮೊತ್ತ ₹30 ಸಾವಿರ ಕೋಟಿಯನ್ನು ತಲುಪಲಿದೆ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಇಂದು ಮಾಧ್ಯಮ ಜೊತೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಅವಧಿಯಲ್ಲಿ ₹16,641 ಕೋಟಿ ಆದಾಯ ಬಂದಿತ್ತು. ಕಳೆದ ವರ್ಷಕ್ಕಿಂತ ಸುಮಾರು ₹2,603 ಕೋಟಿ ಹೆಚ್ಚು ಆದಾಯ ಬಂದಿದೆ ಎಂದು ಹೇಳಿದರು.
ಈ ಸಾಲಿಗೆ ₹29,000 ಕೋಟಿ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಆ ಗುರಿಯನ್ನು ಮೀರಿ ಸುಮಾರು ₹1,000 ಕೋಟಿ ಹೆಚ್ಚುವರಿ ಗಳಿಕೆಯಾಗುವ ನಿರೀಕ್ಷೆ ಇದೆ. ಡಿಸೆಂಬರ್ ಮತ್ತು ಮಾರ್ಚ್‌ನಲ್ಲಿ ಹೆಚ್ಚು ಆದಾಯ ಬರಲಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಸುಮಾರು ₹10,000 ಕೋಟಿ ಸಂಗ್ರಹವಾಗಲಿದೆ ಹೇಳಿದರು.
ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲೈಸೆನ್ಸ್ ನೀಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದ್ದರಿಂದ ಲೈಸೆನ್ಸ್ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಳ್ಳಭಟ್ಟಿ ಮತ್ತು ಅಕ್ರಮ ಮದ್ಯ ಮಾರಾಟವನ್ನು ಮಟ್ಟ ಹಾಕಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.