ವಿದ್ಯಾರ್ಥಿಯನ್ನು ಉಗ್ರ ಕಸಬ್‌ಗೆ ಹೋಲಿಸಿದ ಪ್ರಾಧ್ಯಾಪಕನನ್ನು ಸಮರ್ಥಿಸಿಕೊಂಡ ಸಚಿವ ಬಿಸಿ ನಾಗೇಶ್

ಬೆಂಗಳೂರು: ಕಳೆದ ವಾರ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ತರಗತಿಯಲ್ಲೇ ಮುಸ್ಲಿಂ ವಿದ್ಯಾರ್ಥಿಯನ್ನು ಉಗ್ರ ಅಜ್ಮಲ್ ಕಸಬ್ ಗೆ ಹೋಲಿಸಿದ್ದ ಸಹಾಯಕ ಪ್ರಾಧ್ಯಾಪಕನ ನಡೆ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, ಇದು ದೊಡ್ಡ ವಿಚಾರವಲ್ಲ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಎಲ್ಲರೂ ರಾವಣ ಅಥವಾ ಶಕುನಿ ಎಂಬ ಪದಗಳನ್ನು ಪ್ರತಿನಿತ್ಯ ಬಳಸುತ್ತಾರೆ. ವಿಧಾನಸಭೆಯಲ್ಲಿಯೂ ಸಹ ನಾವು ಅನೇಕ ಬಾರಿ ಈ ರೀತಿ ಮಾತನಾಡಿದ್ದೇವೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುವ ಮೂಲಕ ಪ್ರಾಧ್ಯಾಪಕನ ಮಾತನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

“ಇದು ದುರದೃಷ್ಟಕರ, ಘಟನೆ ನಡೆಯಬಾರದಿತ್ತು, ಶಿಕ್ಷಕರು ಆ ಹೆಸರನ್ನು ಬಳಸಬಾರದಿತ್ತು. ಆದರೆ ಇದು ಅಂತಹ ಗಂಭೀರ ವಿಷಯವಲ್ಲ ಎಂದು ನನಗೆ ಅನಿಸುತ್ತದೆ. ಏಕೆಂದರೆ ನಾವು ರಾವಣನ ಹೆಸರನ್ನು ಅನೇಕ ವಿದ್ಯಾರ್ಥಿಗಳಿಗೆ ಅನೇಕ ಬಾರಿ ಬಳಸುತ್ತೇವೆ. ಶಕುನಿಯ ಹೆಸರನ್ನು ಅನೇಕ ಬಾರಿ ಬಳಸುತ್ತೇವೆ. ಆದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದು ನಾಗೇಶ್ ಹೇಳಿದ್ದಾರೆ.

ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರ(ವ್ಯಕ್ತಿಯ) ಹೆಸರು ಬಳಸುವುದರಿಂದ ಏಕೆ ಸಮಸ್ಯೆಯಾಗುತ್ತಿದೆ ಅಂತ ನನಗೆ ಅರ್ಥವಾಗುತ್ತಿಲ್ಲ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ತರಗತಿಯಲ್ಲಿ ತನನ್ನು ಉಗ್ರ ಕಸಬ್ ಗೆ ಹೋಲಿಸಿದ ಪ್ರಾಧ್ಯಾಪಕರ ಹೇಳಿಕೆಗೆ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿತ್ತು. ಪ್ರಾಧ್ಯಾಪಕರ ಹೇಳಿಕೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

error: Content is protected !!