ದೇಶದ ಭವಿಷ್ಯ ಅಪಾಯಕ್ಕೆ ನೂಕಿದ ಸರ್ಕಾರ: ಮೋದಿ ವಿರುದ್ಧ ರಾಹುಲ್ ಕಿಡಿ

ನವದೆಹಲಿ: ಕೊರೋನಾ, ಪ್ರವಾಹದ ಕಾರಣದಿಂದ ನೀಟ್-ಜೆಇಇ ಪರೀಕ್ಷೆಗಳನ್ನು ಮುಂದೂಡಬೇಕೆಂಬ  ವಿದ್ಯಾರ್ಥಿಗಳ, ಜನಸಮುದಾಯದ ನೈಜ ಬೇಡಿಕೆ ನಿರಾಕರಿಸುವ ಮೂಲಕ ಮೋದಿ ಸರ್ಕಾರ ದೇಶದ ಭವಿಷ್ಯವನ್ನು ಅಪಾಯಕ್ಕೆ ನೂಕುತ್ತಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಇರುವ ಜೆಇಇ-ಪರೀಕ್ಷೆ ಮಂಗಳವಾರದಿಂದ ಆರಂಭವಾದ ಹಿನ್ನಲೆಯಲ್ಲಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡಬೇಕೆಂಬ ಒಂದು ವಿಭಾಗದ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಬೆಂಬಲಿಸಿದ್ದರು.

ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಎರಡು ಬಾರಿ ಮುಂದೂಡಲ್ಪಟ್ಟಿದ್ದ ಜೆಇಇ ಪರೀಕ್ಷೆ ಸೆಪ್ಟೆಂಬರ್ 1 ರಿಂದ 6ರವರೆಗೆ ನಡೆಯಲಿದೆ.

ಮೋದಿ ಸರ್ಕಾರವು ಭಾರತದ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿದೆ. ಅಹಂಕಾರವು ಜೆಇಇ-ನೀಟ್ ಆಕಾಂಕ್ಷಿಗಳ ನಿಜವಾದ ಕಾಳಜಿ ಮತ್ತು ಎಸ್‌ಎಸ್‌ಸಿ ಮತ್ತು ಇತರ ಪರೀಕ್ಷೆಗಳನ್ನು ತೆಗೆದುಕೊಂಡವರ ಬೇಡಿಕೆಗಳನ್ನು ನಿರ್ಲಕ್ಷಿಸುವಂತೆ ಮಾಡುತ್ತಿದೆ. ಖಾಲಿ ಘೋಷಣೆಗಳಲ್ಲದೆ ಉದ್ಯೋಗಗಳನ್ನು ನೀಡಿ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. 

ಎಸ್‌ಎಸ್‌ಸಿ ಮತ್ತು ರೈಲ್ವೆಗಳು ಹಲವು ಪರೀಕ್ಷೆಗಳ ಫಲಿತಾಂಶಗಳನ್ನು ವರ್ಷಗಳಿಂದ ತಡೆಹಿಡಿದಿವೆ. ಯಾರೊಬ್ಬರ ಫಲಿತಾಂಶವು ಪ್ರಕಟಗೊಂಡಿಲ್ಲ. ಇನ್ನು ಬೇರೆ ಬೇರೆ ಪರೀಕ್ಷೆಗಳು ವಿಳಂಬವಾಗುತ್ತಿವೆ ಎಂದು ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!