ಬಿಜೆಪಿ ಮತ್ತು ಆರೆಸ್ಸೆಸ್ ದೇಶದಾದ್ಯಂತ ದ್ವೇಷ ಹರಡುತ್ತಿವೆ- ರಾಹುಲ್ ಗಾಂಧಿ
ಹೈದರಾಬಾದ್: ಭಾರತ್ ಜೋಡೊ ಯಾತ್ರೆ ದೇಶದಲ್ಲಿ ಸಾಮರಸ್ಯ ಮತ್ತು ಸಹೋದರತ್ವ ಉತ್ತೇಜಿಸುವ ಗುರಿ ಹೊಂದಿದೆ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ದೇಶದಾದ್ಯಂತ ದ್ವೇಷ ಹರಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಇಂದು ಭಾರತ್ ಜೋಡೊ ಯಾತ್ರೆ ಕರ್ನಾಟಕದಿಂದ ತೆಲಂಗಾಣ ಪ್ರವೇಶಿಸಿದ್ದು, ಸೇರಿದ್ದ ಭಾರಿ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಅವರು, ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳ ಬಗ್ಗೆಯೂ ಪಾದಯಾತ್ರೆಯಲ್ಲಿ ಧ್ವನಿ ಎತ್ತುತ್ತೇವೆ ಎಂದರು.
ಬಿಜೆಪಿ ಮತ್ತು ಆರೆಸ್ಸೆಸ್‌ನ ಸಿದ್ಧಾಂತ, ದ್ವೇಷ ಮತ್ತು ಹಿಂಸೆಯನ್ನು ವಿರೋಧಿಸಿ ಭಾರತ್ ಜೋಡೊ ಯಾತ್ರೆ ನಡೆಯುತ್ತಿದೆ. ಇಂದು ಎರಡು ಭಾರತಗಳಿವೆ. ಇದರಲ್ಲಿ ಒಂದು, ಆಯ್ದ ಕೆಲವರಿಗೆ ಮತ್ತು ಶ್ರೀಮಂತರಿಗೆ ಇರುವುದಾಗಿದ್ದರೆ, ಮತ್ತೊಂದು ಲಕ್ಷಾಂತರ ಯುವಕರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳಿಂದ ಕೂಡಿದ ಭಾರತವಾಗಿದೆ. ನಮಗೆ ಎರಡು ಭಾರತಗಳು ಬೇಕಾಗಿಲ್ಲ. ಬೇಕಿರುವುದು ಎಲ್ಲರಿಗೂ ಉದ್ಯೋಗ ನೀಡುವ, ಎಲ್ಲರಿಗೂ ನ್ಯಾಯ ಕೊಡುವ ಭಾರತ ಬೇಕು. ದೇಶದಲ್ಲಿ ಸಹೋದರತ್ವ ಇರಬೇಕು’ ಎಂದು ರಾಹುಲ್ ಹೇಳಿದರು.
ಕಾಂಗ್ರೆಸ್ ಸಂಸದ ಮತ್ತು ತೆಲಂಗಾಣ ರಾಜ್ಯದಲ್ಲಿನ ಪಕ್ಷದ ವ್ಯವಹಾರಗಳ ಉಸ್ತುವಾರಿ ಮಾಣಿಕಮ್ ಟ್ಯಾಗೋರ್, ರಾಜ್ಯ ಘಟಕದ ಅಧ್ಯಕ್ಷ ಎ.ರೇವಂತ್ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ರಾಹುಲ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ರಾಜ್ಯದ ಗಡಿಯಲ್ಲಿನ ಕೃಷ್ಣಾ ನದಿಯ ಸೇತುವೆ ಮೂಲಕ ಯಾತ್ರೆ ನಾರಾಯಣಪೇಟೆ ಜಿಲ್ಲೆಗೆ ಕಾಲಿಟ್ಟಾಗ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಪಾಲ್ಗೊಂಡಿದ್ದರು.
ತೆಲಂಗಾಣದಲ್ಲಿ ಸ್ವಲ್ಪ ದೂರ ಪಾದಯಾತ್ರೆ ನಡೆಸಿದ ರಾಹುಲ್ ಗುಡೆಬೆಳ್ಳೂರ್ ಜಿಲ್ಲೆಯಲ್ಲಿ ವಿರಾಮ ತೆಗೆದುಕೊಂಡರು. ನಂತರ ಅವರು ಹೆಲಕಾಪ್ಟರ್‌ನಲ್ಲಿ ಹೈದರಾಬಾದ್‌ಗೆ ತೆರಳಿದರು. ನಂತರ ಅಲ್ಲಿಂದ ದೆಹಲಿಗೆ ಅವರು ಪ್ರಯಾಣಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ದೀಪಾವಳಿ ಪ್ರಯುಕ್ತ ಭಾನುವಾರದಿಂದ ಮೂರು ದಿನಗಳವರೆಗೆ ಯಾತ್ರೆಗೆ ಬಿಡುವು ನೀಡಲಾಗಿದೆ. ತೆಲಂಗಾಣದಲ್ಲಿ ಅ.27ರಿಂದ ಪುನರಾರಂಭ ವಾಗುವ ಯಾತ್ರೆ ನ.7ರಂದು ಮಹಾರಾಷ್ಟ್ರ ಪ್ರವೇಶಿಸುವ ಮೊದಲು ರಾಜ್ಯದಲ್ಲಿ 375 ಕಿ.ಮೀ ಸಾಗಲಿದೆ. ಪ್ರತಿ ದಿನ 20 ರಿಂದ 25 ಕಿ.ಮೀ. ಪಾದಯಾತ್ರೆಯಲ್ಲಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಯಾತ್ರೆಯುದ್ದಕ್ಕೂ ಬುದ್ಧಿಜೀವಿಗಳು, ವಿವಿಧ ಸಮುದಾಯಗಳ ನಾಯಕರು, ರಾಜಕಾರಣಿಗಳು, ಕ್ರೀಡಾಪಟುಗಳು, ಚಿತ್ರರಂಗದ ಪ್ರಮುಖರು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ದೇವಸ್ಥಾನಗಳಿಗೂ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.