ಕೊರೊನಾ ಏರಿಕೆಗೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿದ್ದೇ ಕಾರಣ: ದಿನೇಶ್ ಗುಂಡೂರಾವ್
ಬೆಂಗಳೂರು: ಕೊರೊನಾ ಏರಿಕೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದು ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಿದ್ದರ ಪರಿಣಾಮವೇ ಕಾರಣ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ವಿಶ್ವದಲ್ಲೇ ಮೊದಲನೇ ಸ್ಥಾನಕ್ಕೆ ಭಾರತ ಏರುವುದು ನಿಸ್ಸಂದೇಹವಾಗಿದ್ದು, ಬಿಜೆಪಿ ಘೋಷಿತ ‘ವಿಶ್ವಗುರು’ಗಳ ಬತ್ತಳಿಕೆಯಲ್ಲಿ ಕೊರೊನಾ ಸದ್ದಡಗಿಸಲು ಇನ್ಯಾವ ಅಸ್ತ್ರಗಳಿದ್ದಾವೋ? ಎಂದು ಲೇವಡಿ ಮಾಡುವ ಮೂಲಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ “ಕೆಲುವು ದಿನಗಳಲ್ಲಿ ವಿಶ್ವದಲ್ಲೇ ೧ನೆ ಸ್ಥಾನಕ್ಕೆ ಭಾರತ ಏರುವುದು ನಿಸ್ಸಂದೇಹ. ಜನಸಂಖ್ಯೆ ಹೆಚ್ಚಿರುವುದರಿಂದ ಇದು ಆಶ್ಚರ್ಯಕರ ಸಂಗತಿ ಅಲ್ಲ. ಆದ್ರೆ ನೆರ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ವೈಫಲ್ಯ ಸ್ಪಷ್ಟವಾಗುತ್ತದೆ. “ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಬರ್ಮಾ, ಶ್ರೀಲಂಕಾ, ಅಫಘಾನಿಸ್ತಾ, ಭೂತಾನ್, ಚೀನಾ ನಮಗಿಂತ ಉತ್ತಮ ಸ್ಥಿತಿಯಲ್ಲಿದ್ದಾರೆ.” ಎಂದೂ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.