ಡ್ರಗ್ಸ್ ದಂಧೆ: 15ಕ್ಕೂ ಅಧಿಕ ನಟ, ನಟಿಯರ ಪಟ್ಟಿ ಸಿದ್ಧ, 4 ಅಂಚೆ ಅಧಿಕಾರಿಗಳ ವಿರುದ್ಧ ಕ್ರಮ: ಬೊಮ್ಮಾಯಿ
ಹುಬ್ಬಳ್ಳಿ: ಡ್ರಗ್ಸ್ ದಂಧೆ ಸಂಬಂಧಿಸಿ ಈಗಾಗಲೇ ಅಂಚೆ ಇಲಾಖೆಯ ನಾಲ್ವರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಭಾವಕ್ಕೆ ಚಿತ್ರರಂಗದವರಷ್ಟೇ ಅಲ್ಲದೆ ಇತರರೂ ಒಳಗಾಗಿದ್ದಾರೆ. ಸದ್ಯ ನಾವು ಅದರ ಮೂಲ ಜಾಲವನ್ನು ಹುಡುಕುತ್ತಿದ್ದೇವೆ. ಡಾರ್ಕ್‌ನೈಟ್ ಆನ್‌ಲೈನ್ ವೆಬ್‌ಸೈಟ್ ಭೇದಿಸಿದ್ದೇವೆ. ಡ್ರಗ್ಸ್ ದಂಧೆ ತಡೆಗಟ್ಟಲು ಶ್ರಮಿಸುತ್ತಿರುವ ಪೊಲೀಸರ ಮೇಲೆ ರಾಜಕಾರಣಿಗಳು ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆಂದೆಂದು ಸ್ಪಷ್ಟಪಡಿಸಿದರು.
ಡ್ರಗ್ಸ್ ಎಲ್ಲಿಂದ, ಯಾರಿಗೆ, ಎಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ ಎಂಬುದರ ಮಾಹಿತಿ ಕಲೆ ಹಾಕುವುದು ಕಷ್ಟವಾದರೂ ರಾಜ್ಯ ಪೊಲೀಸರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ವಿದೇಶದಿಂದ ಡ್ರಗ್ಸ್ ಸರಬರಾಜು ಮಾಡುವ ಕೆನಡಾ, ನೈಜೀರಿಯಾ ಸಹಿತ ಹಲವು ದೇಶಗಳ ಪ್ರಜೆಗಳನ್ನು ಬಂಧಿಸಲಾಗಿದೆ ಎಂದರು.
ಕೇಂದ್ರದ ಆ್ಯಂಟಿ ನಾರ್ಕೋಟಿಕ್ ವಿಭಾಗದವರು ಮಹಿಳೆ ಸಹಿತ ಕೆಲವು ಸಿಂಥೆಟಿಕ್ ಡ್ರಗ್ಸ್ ವ್ಯವಹಾರ ಮಾಡುವವರನ್ನು ಬಂಧಿಸಿದ್ದಾರೆ. ಸಿಸಿಬಿಯವರು ಕೂಡ ಹಲವು ಕಡೆ ದಾಳಿ ಮಾಡಿದ್ದಾರೆ. ಶನಿವಾರ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ನೀಡಿದ್ದೇವೆ.
ಅವರು ಏನು ಮಾಹಿತಿ ಕೊಡುತ್ತಾರೆ ನೋಡೋಣ. ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಸಿಸಿಬಿಯವರಿಗೆ ಹೇಳಿದ್ದೇವೆ. ಚಿತ್ರರಂಗದವರು ಅಥವಾ ಇನ್ಯಾರೇ ಇದ್ದರೂ ನಾವು ಬಿಡಲ್ಲ ಎಂದು ಅವರು ಹೇಳಿದರು.
15ಕ್ಕೂ ಅಧಿಕ ನಟ, ನಟಿಯರ ಪಟ್ಟಿ ಸಿದ್ಧ ಸ್ಯಾಂಡಲ್‌ವುಡ್ ನಟ-ನಟಿಯರಿಗೆ ಮಾದಕ ವಸ್ತು ಪೂರೈಕೆ ಪ್ರಕರಣದ ಪ್ರಮುಖ ಆರೋಪಿ ಅನಿಕಾಳ ಹೇಳಿಕೆಯನ್ನಾಧರಿಸಿ ಸುಮಾರು 15ಕ್ಕೂ ಅಧಿಕ ಮಂದಿಯ ನಟ-ನಟಿಯರ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂವರು ನಟಿಯರು, ಮೂವರು ನಟರು, ಒಬ್ಬರು ಸಂಗೀತ ನಿರ್ದೇಶಕರು ಮತ್ತು ಇತರೆ ಧಾರವಾಹಿ ಕಲಾವಿದರು ಹಾಗೂ ಗಣ್ಯರ ಮಕ್ಕಳ ಹೆಸರನ್ನು ಪಟ್ಟಿ ಮಾಡಲಾಗಿದೆ.
ಹೆಸರು ಬಹಿರಂಗ ಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಮತ್ತೊಂದೆಡೆ ನಟ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಸಿಸಿಬಿ ಎದುರು ನೀಡುವ ಹೇಳಿಕೆಯನ್ನಾಧರಿಸಿ ಇನ್ನಷ್ಟು ನಟ-ನಟಿಯರ ಹೆಸರು ಸಿದ್ದಪಡಿಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.