ಅಶ್ಲೀಲ ವಿಡಿಯೊ ಪ್ರಕರಣ: ಸಂತೋಷ ಗುರೂಜಿ ವಿರುದ್ಧದ ಆರೋಪ ಸುಳ್ಳೆಂದು ಸಾಬೀತು

ಬ್ರಹ್ಮಾವರ: (ಉಡುಪಿ ಟೈಮ್ಸ್ ವರದಿ)ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಅಶ್ಲೀಲ ವಿಡಿಯೊ ಪ್ರಕರಣದಲ್ಲಿ ಬಾರ್ಕೂರು ಮಹಾಸಂಸ್ಥಾನದ ಸಂತೋಷ ಭಾರತಿ ಸ್ವಾಮೀಜಿ ಅವರ ವಿರುದ್ಧ ಅಪಪ್ರಚಾರಕ್ಕೆ ಬಳಸಲಾದ ವಿಡಿಯೊ ತುಣುಕುಗಳು ನಕಲಿ ಎಂದು ಸಾಬೀತಾಗಿದೆ. ಸ್ವಾಮೀಜಿ ಅವರ ತೇಜೋವಧೆಗೆ ಷಡ್ಯಂತ್ರ ನಡೆದಿರುವುದು ದೃಢವಾಗಿದೆ ಎಂದು ಸಂಸ್ಥಾನದ ವಕೀಲ ನಾಗರಾಜ ನಾಯಕ ತಿಳಿಸಿದರು.

‘ಕಳೆದ ವರ್ಷ ಜೂನ್‌ನಲ್ಲಿ ಸ್ವಾಮೀಜಿಯವರಿಗೆ ಕರೆಮಾಡಿ ನಮ್ಮಲ್ಲಿ ನಿಮ್ಮ ಕುರಿತು ವಿಡಿಯೊ ಇದೆ. ₹10 ಕೋಟಿ ಹಣ ನೀಡಬೇಕು. ಪೊಲೀಸರಿಗೆ ತಿಳಿಸಿದರೆ ಟಿ.ವಿ. ಮಾಧ್ಯಮದಲ್ಲಿ ಸುದ್ದಿ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಸ್ವಾಮೀಜಿ ಭಯಪಡದೆ,  ಠಾಣೆಗೆ ದೂರು ಸಲ್ಲಿಸಿ, ಆರೋಪಿಗಳಿಗೆ ಶಿಕ್ಷೆ ಆದರೆ ಸಾಕಾಗದು. ನಮ್ಮಂತವರ ಅಗ್ನಿ ಪರೀಕ್ಷೆ ಆಗಲೇಬೇಕು ಎಂದು ವೈಜ್ಞಾನಿಕ ತನಿಖೆಗೂ ಆಗ್ರಹಿಸಿದ್ದರು’ ಎಂದು ಅವರು ಹೇಳಿದರು.

ಮೂರು ವರ್ಷಗಳ ಹಿಂದೆ ಬೆಂಗಳೂರಿನ ಆಶ್ರಮದಲ್ಲಿ ಗನ್‌ಮ್ಯಾನ್ ಮತ್ತು ಇಬ್ಬರು ಕೆಲಸಗಾರರು ಸ್ವಾಮೀಜಿ ಅವರ ಕಪಾಟಿನಲ್ಲಿದ್ದ 3 ಲಕ್ಷ ನಗದನ್ನು ಕದ್ದಿದ್ದರು. ಪೊಲೀಸರ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದರು. ಇದರಿಂದ ಸಿಟ್ಟಾಗಿದ್ದ ಗನ್‌ಮ್ಯಾನ್ ಸ್ವಾಮೀಜಿ ಅವರ ಮೇಲೆ ಹಗೆ ತೀರಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂದರು.

ಸ್ವಾಮೀಜಿ ಪರ ವಕೀಲ ಎಸ್.ರಾಜಶೇಖರ್, ಜಯರಾಮ ಶೆಟ್ಟಿ, ಪ್ರಭಾಕರ ಶೆಟ್ಟಿ,
ಚಂದ್ರಶೇಖರ್ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಸೀತಾರಾಮ ಶೆಟ್ಟಿ, ಅಂಕೋಲದ ಬಾಬು ಸುಂಕೇರಿ, ಆನಂದ, ಡಿ.ಎನ್.ಎನ್. ನಾಯಕ್ ಇದ್ದರು.

ವಿಧಿ ವಿಜ್ಞಾನ ವರದಿ: ಸ್ವಾಮೀಜಿ ಅವರ ಆಗ್ರಹದಂತೆ  ಪೊಲೀಸರು ವಿಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು . ವಿಧಿ ವಿಜ್ಞಾನದ ವರದಿಯಲ್ಲಿ ದೃಶ್ಯಗಳನ್ನು ಎಡಿಟ್ ಮಾಡಲಾಗಿ, ಚಿತ್ರೀಕರಣದಲ್ಲಿ ನೈಜತೆ ಇಲ್ಲ ಎಂಬ ವರದಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಮತ್ತು ಗನ್‌ಮ್ಯಾನ್‌ ಕೃತ್ಯದ ಬಗ್ಗೆ ಪೊಲೀಸ್ ಇಲಾಖೆ ವಿಚಾರಣೆ ನಡೆಸಿ ಆತನ ವಿರುದ್ಧ ಕ್ರಮ ಜರುಗಿಸಲಾಗಿದೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ ಎಂದು ವಕೀಲ ನಾಗರಾಜ ನಾಯಕ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!